ಬೆಂಗಳೂರು: ಅಪಘಾತ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಕಾರಿಗೆ ಬೈಕ್ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹೊಸಕೋಟೆ-ಚಿಂತಾಮಣಿ ರಾಜ್ಯಹೆದ್ದಾರಿಯಲ್ಲಿ ಗುರುವಾರ ನಡೆದಿದೆ.
ಬೆಂಗಳೂರಿನ ಶಿವಾಜಿನಗರ ನಿವಾಸಿ ಮೊಹಮ್ಮದ್ ಫೈಜ್(18) ಹಾಗೂ ಕಣ್ಣೂರಹಳ್ಳಿ ನಿವಾಸಿ ಜಗದೀಶ್(30) ಮೃತಪಟ್ಟ ಬೈಕ್ ಸವಾರರು. ಅಬ್ಬಾಸ್, ಅಬ್ಬಾಸ್ ಪಾಷಾ ಮತ್ತು ಅಬುಜರ್ ಗಾಯಾಳುಗಳಾಗಿದ್ದು ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದ ವೇಳೆ ಕಾರು ಚಾಲಕ ಪ್ರಗತಿಶ್ ರಾವ್ ಕುಡಿದ ಅಮಲಿನಲ್ಲಿ ವಾಹನ ಚಲಾಯಿಸಿರುವ ಶಂಕೆ ವ್ಯಕ್ತವಾಗಿದೆ.
ಈತ ಚಿಂತಾಮಣಿಯಿಂದ ಹೊಸಕೋಟೆ ಕಡೆಗೆ ಹೋಗುತ್ತಿದ್ದಾಗ ಪಾದಚಾರಿಗೆ ಡಿಕ್ಕಿ ಹೊಡೆದಿದ್ದಾನೆ. ಸಾರ್ವಜನಿಕರು ಆತನನ್ನು ಹಿಂಬಾಲಿಸಿದ ನಂತರ, ಸ್ಥಳದಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದಿದ್ದಾನೆ.
ಘಟನೆ ಬಳಿಕ ಕಾರು ನಿಲ್ಲುತ್ತಿದ್ದಂತೆಯೇ ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದಾರೆ. ನಂತರ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮದ್ಯ ಸೇವನೆ ಕುರಿತು ಆರೋಪಿಯ ರಕ್ತ ಮತ್ತು ಮೂತ್ರದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಹೊಸಕೋಟೆ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಘಟನೆ ಸಂಬಂಧ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಮೃತರ ಕುಟುಂಬಗಳಿಗೆ ನ್ಯಾಯಕೊಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.