ಬೆಂಗಳೂರು: ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಅಮಾನತುಗೊಂಡಿರುವ ಜೆಡಿಎಸ್ ಮುಖಂಡ ಪ್ರಜ್ವಲ್ ರೇವಣ್ಣ ಅವರ ಸ್ನೇಹಿತೆಯೊಬ್ಬರಿಗೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್ಐಟಿ) ಶನಿವಾರ ನೋಟಿಸ್ ಜಾರಿ ಮಾಡಿದೆ.
ತಮ್ಮ ಅಶ್ಲೀಲ ವಿಡಿಯೋಗಳು ಬಹಿರಂಗವಾಗುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಜರ್ಮನಿಗೆ ತೆರಳಿ ತಲೆಮರೆಸಿಕೊಂಡಿದ್ದರು. ಮಾಜಿ ಸಂಸದ ವಿದೇಶದಲ್ಲಿ 34 ದಿನ ವಾಸ್ತವ್ಯ ಮಾಡಿದ್ದರು. ಜರ್ಮನಿಯಲ್ಲಿ ಪ್ರಜ್ವಲ್ ರೇವಣ್ಣಗೆ ವಾಸ್ತವ್ಯ ಹಾಗೂ ಓಡಾಟಕ್ಕೆ ಅವರ ಸ್ನೇಹಿತೆಯೊಬ್ಬರು ಆರ್ಥಿಕ ನೆರವು ನೀಡಿದ್ದಾರೆ ಎನ್ನಲಾಗಿದ್ದು, ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ಮೂಲದವರಾಗಿರೋ ಪ್ರಜ್ವಲ್ ಸ್ನೇಹಿತೆಗೆ ಎಸ್ಐಟಿ ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಪ್ರಜ್ವಲ್ ರೇವಣ್ಣ ವಿದೇಶದಲ್ಲಿದ್ದಾಗ ಅವರ ಎಲ್ಲಾ ಬ್ಯಾಂಕ್ ಖಾತೆಗಳನ್ನ ಬ್ಲಾಕ್ ಮಾಡಲಾಗಿತ್ತು. ಈ ವೇಳೆ ವಿದೇಶದಲ್ಲಿದ್ದ ಸ್ನೇಹಿತೆಯೊಬ್ಬರು ಅವರಿಗೆ ನೆರವು ನೀಡಿದ್ದಕ್ಕೆ ದಾಖಲೆಗಳು ಸಿಕ್ಕಿವೆ. ಅದನ್ನು ಆಧರಿಸಿ ಮಹಿಳೆಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.