ಹಾಸನ: ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ಮತ್ತು ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆಯನ್ನು ಚುರುಕುಗೊಳಿಸಿದ್ದು, ಮ್ಯಾಪಿಂಗ್ ಮತ್ತು ಪೆನ್ ಡ್ರೈವ್ ಹಂಚಿಕೆ ಮಾಡಿದ ಆರೋಪದ ಮೇಲೆ ಪ್ರಜ್ವಲ್ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಗೌಡ ಅವರನ್ನು ಶನಿವಾರ ಬಂಧಿಸಿದೆ.
ಎಸ್‌ಐಟಿ ಅಧಿಕಾರಿಗಳು ಕಾರ್ತಿಕ್ ಗೌಡನನ್ನು ಹಾಸನ-ಮೈಸೂರು ಗಡಿಗ್ರಾಮದಲ್ಲಿ ಇಂದು ಬಂಧಿಸಿದ್ದಾರೆ. ಕಾರ್ತಿಕ್ ಗೌಡ ಅವರು ಪ್ರಜ್ವಲ್ ಅವರ ಅಶ್ಲೀಲ ವಿಡಿಯೋಗಳನ್ನು ಮ್ಯಾಪ್ ಮಾಡಿ ಅದನ್ನು ಹಂಚಿದ್ದಾರೆ ಎಂದು ಆರೋಪಿಸಲಾಗಿದೆ.
ಕಾರ್ತಿಕ್ ಗೌಡ ಅವರು ಎಸ್‌ಐಟಿ ಮುಂದೆ ಪ್ರಜ್ವಲ್ ಅವರ ಅಶ್ಲೀಲ ವಿಡಿಯೋಗಳನ್ನು ಹೊಂದಿರುವ ಪೆನ್‌ಡ್ರೈವ್ ಅನ್ನು ಮೊದಲು ಬಿಜೆಪಿ ಮುಖಂಡ ದೇವರಾಜೇಗೌಡ ಎಂಬುವವರಿಗೆ ನೀಡಿರುವುದಾಗಿ ವಿಚಾರಣೆ ವೇಳೆ ಹೇಳಿದ್ದರು.
ಈ ಸಂಬಂಧ ಹಾಸನದ ಜೆಡಿಎಸ್ ಮುಖಂಡ ಹಾಗೂ ವಕೀಲ ಪೂರ್ಣಚಂದ್ರ ತೇಜಸ್ವಿ ಅವರು ಕಾರ್ತಿಕ್ ಗೌಡ ಮತ್ತು ಇತರ ಇಬ್ಬರ ವಿರುದ್ಧ ಹಾಸನದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇತ್ತೀಚೆಗೆ ಹೊಳೆನರಸೀಪುರ ಪಟ್ಟಣದಲ್ಲಿ ನಡೆದ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರ ವಿಜಯೋತ್ಸವದಲ್ಲಿ ಹೊಳೆನರಸೀಪುರದ ಕಾರ್ತಿಕ್ ಗೌಡ ಮತ್ತು ಪುಟ್ಟರಾಜ್ ಅಲಿಯಾಸ್ ಪುತ್ತಿಗೆ ಪಾಲ್ಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ವಿಚಾರ ಇತ್ತೀಚೆಗೆ ಸಾರ್ವಜನಿಕ ವಲಯದಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.