ಗ್ರಾಮಕ್ಕೆ ಹರಿದು ಬಂದಿರುವ ಜನಸಾಗರ. 
ರಾಜ್ಯ

ಅಸ್ತಮಾ ನಿವಾರಣೆಗೆ ಮಾತ್ರೆ: ಉಚಿತ ಔಷಧಿಗಾಗಿ ಕೊಪ್ಪಳದ ಗ್ರಾಮಕ್ಕೆ ಸಾವಿರಾರು ಜನ ಭೇಟಿ!

ಈ ಔಷಧಿ ಪಡೆಯಲು ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಿಂದ ಸಾವಿರಾರು ಜನರು ಗ್ರಾಮಕ್ಕೆ ಭೇಟಿ ನೀಡಿದ್ದಾರೆ.

ಕೊಪ್ಪಳ: ತಾಲ್ಲೂಕಿನ ಹಾಲವರ್ತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುಟಕನಹಳ್ಳಿ ಗ್ರಾಮದಲ್ಲಿ ಅಸ್ತಮಾ ನಿವಾರಣೆಗೆ ಉಚಿತ ಔಷಧಿ ನೀಡಲಾಗುತ್ತಿದ್ದು, ಈ ಬಾರಿ ನಿರೀಕ್ಷೆಗೂ ಮೀರಿ ಜನಸಾಗರ ಹರಿದು ಬಂದಿದೆ.

ಈ ಔಷಧಿ ಪಡೆಯಲು ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಿಂದ ಸಾವಿರಾರು ಜನರು ಗ್ರಾಮಕ್ಕೆ ಭೇಟಿ ನೀಡಿದ್ದಾರೆ.

ಜೂ. 8ರಂದು ಬೆಳಗ್ಗೆ 7.47ಕ್ಕೆ ಸರಿಯಾಗಿ ಔಷಧ ಸೇವಿಸಬೇಕು. ಹೀಗಾಗಿ, ಶುಕ್ರವಾರ ಸಂಜೆಯೇ ಕುಟಗನಳ್ಳಿ ಗ್ರಾಮಕ್ಕೆ 70-80 ಸಾವಿರಕ್ಕೂ ಅಧಿಕ ಜನರು ಆಗಮಿಸಿದ್ದರು. ಹಲವು ಜನರು ಆಶ್ರಯ ಸಿಗದೆ ಸಮಸ್ಯೆ ಎದುರಿಸಿದರು.

ರಾತ್ರಿಪೂರ್ತಿ ಬೀದಿ ಬೀದಿಯಲ್ಲಿ, ಗುಡಿ-ಗುಂಡಾರಗಳಲ್ಲಿ ತಂಗಿದ್ದರು. ವಿಪರೀತ ಮಳೆಯಾಗಿದ್ದರಿಂದ ಬಂದಿದ್ದ ಜನರ ಪಾಡು ದೇವರಿಗೆ ಪ್ರೀತಿ ಎನ್ನುವಂತಾಗಿತ್ತು. ನೆರೆಯ ಆಂಧ್ರ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ, ಗೋವಾ ಸೇರಿದಂತೆ ಹತ್ತಾರು ರಾಜ್ಯಗಳಿಂದ ಹತ್ತಾರು ಸಾವಿರಕ್ಕೂ ಅಧಿಕ ಜನರು ಆಗಮಿಸಿದ್ದರು. ಹಾಗೆಯೇ ರಾಜ್ಯದ ಮೂಲೆ ಮೂಲೆಯಿಂದ ಅಪಾರ ಸಂಖ್ಯೆಯ ಜನರು ಆಗಮಿಸಿದ್ದರು.. ಶುಕ್ರವಾರವೇ ಸುಮಾರು 80 ಸಾವಿರ ಜನರು ಸೇರಿದ್ದರು.

ಔಷಧವನ್ನು ಜೂ. 8ರಂದು ಬೆಳಗ್ಗೆ 7.47ಕ್ಕೆ ಸರಿಯಾಗಿ ಸೇವಿಸಬೇಕಾಗಿರುವುದರಿಂದ ಅದಕ್ಕಿಂತ ಮುಂಚೆ ಬೆಳಗಿನ ಜಾವ 4 ಗಂಟೆಗೆ ಔಷಧ ವಿತರಣೆ ಮಾಡಲಾಗುತ್ತದೆ. ಹೀಗಾಗಿ, ರಾತ್ರಿಯೇ ಬಂದು ಜನರು ಸರದಿಯಲ್ಲಿ ನಿಂತಿದ್ದರು.

ವಿಶಾಲವಾದ ಜಾಗದಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆಯಾದರೂ ಮಳೆ ಬಂದಿದ್ದರಿಂದ ತೀವ್ರ ಸಮಸ್ಯೆಯಾಗಿತ್ತು.

ಔಷಧಿ ಸೇವನೆಗಾಗಿ ಭಾರೀ ಪ್ರಮಾಣದಲ್ಲಿ ಜನರು ಬರುವ ಹಿನ್ನೆಲೆಯಲ್ಲಿ ಸ್ಥಳೀಯರು ಕೂಡ ತರಕಾರಿ ಮಾರಾಟ, ಆಹಾರ ಪದಾರ್ಥ, ತಿಂಡಿ-ತಿನಿಸು ಮಾರಾಟ ಮಾಡಲು ತಾತ್ಕಾಲಿಕ ಮಳಿಗೆಗಳನ್ನು ಹಾಕಿಕೊಂಡಿದ್ದರು. ಇದರಿಂದ ಸ್ಥಳದಲ್ಲಿ ಜಾತ್ರೆ ನಡೆಯುತ್ತಿರುವ ವಾತಾವರಣ ನಿರ್ಮಾಣವಾಗಿತ್ತು.

ಕುಟುಗನಳ್ಳಿ ಗ್ರಾಮದಲ್ಲಿ ಕಳೆದ 60 ವರ್ಷಗಳಿಂದಲೂ ಕುಲಕರ್ಣಿ ಕುಟುಂಬ ಅಸ್ತಮಾ ರೋಗಿಗಳಿಗೆ ಔಷಧ ವಿತರಣೆ ಮಾಡುತ್ತಾ ಬಂದಿದೆ. ಇಲ್ಲಿ ನೀಡುವ ಔಷಧವನ್ನು ಮೃಗಶಿರ ಮಳೆ ಸೇರುವ ಕಾಲದಲ್ಲಿಯೇ ಸ್ವೀಕಾರ ಮಾಡಿದರೆ ಅಸ್ತಮಾ ನಿವಾರಣೆಯಾಗುತ್ತದೆ ಎನ್ನುವುದು ನಂಬಿಕೆಯಾಗಿದೆ. ಸತತ ಮೂರು ವರ್ಷಗಳ ಕಾಲ ಸೇವನೆ ಮಾಡಿದರೂ ರೋಗ ಸಂಪೂರ್ಣ ವಾಸಿಯಾಗುತ್ತದೆ ಎನ್ನುವ ನಂಬಿಕೆಯಿದೆ. ಹೀಗಾಗಿ ನಾನಾ ರಾಜ್ಯದಿಂದಲೂ ರೋಗಿಗಳು ಆಗಮಿಸುವ ಸಂಪ್ರದಾಯ ಇದೆ.

ಮೊದಲು ವ್ಯಾಸರಾವ್ ಕುಲಕರ್ಣಿ ಅವರು ಔಷಧ ವಿತರಣೆ ಪ್ರಾರಂಭಿಸಿದ್ದು, ಈಗ ಅವರ ಪುತ್ರ ಅಶೋಕ ಕುಲಕರ್ಣಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇದಕ್ಕಾಗಿ ವರ್ಷಪೂರ್ತಿ ತಯಾರಿ ಮಾಡಿಕೊಳ್ಳಲಾಗುತ್ತದೆ. ಹತ್ತಾರು ವರ್ಷಗಳ ಹಳೆಯ ಬೆಲ್ಲದಲ್ಲಿ ತಯಾರು ಮಾಡುವ ಈ ಔಷಧವನ್ನು ಗುಳಿಗೆ ರೂಪದಲ್ಲಿ ನೀಡಲಾಗುತ್ತದೆ. ಈ ಗುಳಿಗೆಯನ್ನು ತಯಾರು ಮಾಡಲು ಹದಿನೈದು ದಿನಗಳ ಕಾಲ ಕುಲಕರ್ಣಿ ಕುಟುಂಬ ಶ್ರಮಿಸುತ್ತದೆ.

ನಮ್ಮ ತಂದೆಯವರ ಕಾಲದಿಂದ ವಿತರಣೆ ಮಾಡುತ್ತಿದ್ದೇವೆ. ಈಗ ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಇದು ನನ್ನ 40ನೇ ವರ್ಷದ ಔಷಧ ವಿತರಣೆಯಾಗಿದೆ. ಈ ವರ್ಷ ಹೊಸದಾಗಿ ದೊಡ್ಡ ಸಂಖ್ಯೆಯಲ್ಲಿ ಅಸ್ತಮಾ ರೋಗಿಗಳು ಆಗಮಿಸಿದ್ದಾರೆಂದು ಅಶೋಕ್ ಕುಲಕರ್ಣಿಯವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ