ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬಾತನ ಹತ್ಯೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅವರ ಗೆಳತಿ ಪವಿತ್ರಾ ಗೌಡ ಪಾತ್ರವಿದೆ ಎಂಬ ಪ್ರಾಥಮಿಕ ತನಿಖೆಯಲ್ಲಿ ಇಬ್ಬರ ಬಂಧನವಾಗಿದೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ಸಿಟ್ಟಿನಲ್ಲಿ ದರ್ಶನ್ ಮತ್ತು ಅವರ ಗೆಳೆಯರು 33 ವರ್ಷದ ರೇಣುಕಾ ಸ್ವಾಮಿಯನ್ನು ಅಪಹರಿಸಿ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಪಟ್ಟಣಗೆರೆ ಜಯಣ್ಣ ಅವರಿಗೆ ಸೇರಿದ ಶೆಡ್ ಗೆ ಕರೆತಂದು ಹಲ್ಲೆ ನಡೆಸಿದ್ದರಲ್ಲಿ ಆತನ ಪ್ರಾಣಪಕ್ಷಿ ಹಾರಿಹೋಗಿದೆ.
ಕೊಲೆಯಾದ ರೇಣುಕಾಸ್ವಾಮಿ ದರ್ಶನ್ ಅಭಿಮಾನಿ: ಇಲ್ಲಿ ಮತ್ತೊಂದು ಖೇದಕರ ಸಂಗತಿ ಎಂದರೆ ಚಿತ್ರದುರ್ಗ ಮೂಲದ ಕೊಲೆಯಾದ ರೇಣುಕಾಸ್ವಾಮಿ ನಟ ದರ್ಶನ್ ರ ಅಪ್ಪಟ ಅಭಿಮಾನಿ. ರೇಣುಕಾಸ್ವಾಮಿ ಚಿತ್ರದುರ್ಗದ ನಿವಾಸಿ, ನಗರದ ಲಕ್ಷ್ಮೀವೆಂಕಟೇಶ್ವರ ಬಡಾವಣೆಯಲ್ಲಿ ವಾಸವಿದ್ದ. ಅಪೋಲೊ ಮೆಡಿಕಲ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ. ಕೊಲೆ ಆಗಿರುವ ರೇಣುಕಾ ಸ್ವಾಮಿ, ಬೆಸ್ಕಾಂ ನಿವೃತ್ತ ನೌಕರ ಶಿವನಗೌಡ-ರತ್ನಪ್ರಭಾ ದಂಪತಿ ಪುತ್ರ. ಈತ ದರ್ಶನ್ ಅಭಿಮಾನಿ ಆಗಿದ್ದ.
ವಿಜಯಲಕ್ಷ್ಮಿ ಹಾಗೂ ದರ್ಶನ್ ದಾಂಪತ್ಯದ ಮಧ್ಯೆ ಬಂದಿರುವ ಪವಿತ್ರಾ ಬಗ್ಗೆ ಆಕ್ರೋಶ ಹೊಂದಿದ್ದ. ಹಾಗಾಗಿ ಪವಿತ್ರಾಗೆ ಅಶ್ಲೀಲ ಸಂದೇಶಗಳ ಕಳಿಸಿದ್ದ. ಇದರಿಂದ ಕೆರಳಿದ್ದ ಪವಿತ್ರಾ ಗೌಡ ಮತ್ತು ನಟ ದರ್ಶನ್ ಅವನನ್ನು ಕರೆಸಿ ಒಂದು ಗತಿ ಕಾಣಿಸಬೇಕೆಂದು ನಿಶ್ಚಯಿಸಿದ್ದರು.
ವರ್ಷ ಹಿಂದೆ ಮದುವೆ, ಪತ್ನಿ 3 ತಿಂಗಳ ಗರ್ಭಿಣಿ: ಇನ್ನೊಬ್ಬರ ವೈಯಕ್ತಿಕ ಜೀವನದ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸಂದೇಶ ಕಳುಹಿಸಿ ಹತ್ಯೆಯಾಗಿರುವ ರೇಣುಕಾ ಸ್ವಾಮಿಗೆ ಕಳೆದ ವರ್ಷ ಜೂನ್ 28ರಂದು ವಿವಾಹವಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಮೊದಲ ವಾರ್ಷಿಕೋತ್ಸವ ಆಚರಿಸುವುದರಲ್ಲಿದ್ದ. ಅದಲ್ಲದೆ ರೇಣುಕಾಸ್ವಾಮಿ ಪತ್ನಿ ಈಗ ಮೂರು ತಿಂಗಳ ಗರ್ಭಿಣಿ. ಪತಿಯನ್ನು ಕಳೆದುಕೊಂಡ ನೋವಿನಲ್ಲಿ ಪತ್ನಿ ಮತ್ತು ರೇಣುಕಾಸ್ವಾಮಿ ಪೋಷಕು ತೀವ್ರ ದುಃಖದಲ್ಲಿದ್ದಾರೆ.
ರೇಣುಕಾ ಸ್ವಾಮಿ ಭಜರಂಗದಳದಲ್ಲಿಯೂ ಗುರುತಿಸಿಕೊಂಡಿದ್ದ. 3ವರ್ಷದ ಹಿಂದೆ ಭಜರಂಗದಳ ಸುರಕ್ಷಾ ಪ್ರಮುಖ ಆಗಿ ಗುರುತಿಸಿಕೊಂಡಿದ್ದ. ನಟ ದರ್ಶನ್ ಅವರಿಗೆ ಆತ್ಮೀಯವಾಗಿರುವ ನಟಿ ಪವಿತ್ರ ಗೌಡ ಅವರ ಫೋಟೋಗಳಿಗೆ ರೇಣುಕಾ ಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಆಶ್ಲೀಲವಾಗಿ ಕಮೆಂಟ್ ಮಾಡುತ್ತಿದ್ದ. ಇದಲ್ಲದೆ ಕೆಟ್ಟದಾಗಿ ಮೆಸೇಜ್ ಮಾಡುತ್ತಿದ್ದ ಎನ್ನಲಾಗಿದೆ.
ಹೀಗಾಗಿ ಚಿತ್ರದುರ್ಗದಿಂದ ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆಸಲಾಗಿತ್ತು. ಜೂ. 8ರಂದು ರಾತ್ರಿ ಆತನನ್ನು ಬೆಂಗಳೂರಿಗೆ ಶೆಡ್ ಒಂದಕ್ಕೆ ಕರೆತಂದು ಬಲವಾಧ ಆಯುಧದಿಂದ ಅವರಿಗೆ ಹೊಡೆದು ಕೊಲೆಗೈದು, ಮೃತದೇಹವನ್ನು ಮೋರಿಗೆ ಎಸೆಯಲಾಗಿತ್ತು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಜೂ. 9ರಂದು ಮೋರಿಯಲ್ಲಿ ಬೀದಿ ನಾಯಿಗಳು ಮೃತದೇಹವನ್ನು ಎಳೆಯುತ್ತಿದ್ದನ್ನು ನೋಡಿ, ಪಕ್ಕದಲ್ಲಿದ್ದ ಅಪಾರ್ಟ್ ಮೆಂಟ್ ಭದ್ರತಾ ಸಿಬ್ಬಂದಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರಿಗೆ ಮೃತದೇಹ ಸಿಕ್ಕಾಗ ತನಿಖೆ ಶುರುವಾಗಿದೆ. ಈ ಪ್ರಕರಣದಲ್ಲಿ ಮೂವರು ಮೊದಲು ಠಾಣೆಗೆ ಬಂದು ನಾವೇ ಕೊಲೆ ಮಾಡಿದ್ದು, ಹಣಕಾಸಿನ ವಿಚಾರದಲ್ಲಿ ಈ ಕೊಲೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಆದರೆ ಪೊಲೀಸರಿಗೆ ಈ ಬಗ್ಗೆ ಸಂಶಯ ಉಂಟಾಗಿದೆ. ಮತ್ತಷ್ಟು ಆಳವಾಗಿ ತನಿಖೆಗೆ ಇಳಿದು ಅವರನ್ನು ವಿಚಾರಣೆ ಮಾಡಿದ ನಂತರ ಇಬ್ಬರು ಕೊಲೆ ಆರೋಪಿಗಳನ್ನು ಬಂಧಿಸಲಾಗಿತ್ತು. ಅವರ ವಿಚಾರಣೆ ವೇಳೆ ಘಟನೆ ಹಿಂದಿನ ಕಾರಣ ಬೆಳಕಿಗೆ ಬಂದಿದೆ.
ಕೊಲೆ ಮಾಡಿದ ಇಬ್ಬರು ಆರೋಪಿಗಳ ಜೊತೆ ದರ್ಶನ್ ನಿರಂತರ ಸಂಪರ್ಕದಲ್ಲಿದ್ದರು ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ ಆರೋಪಿಗಳು ತಪ್ಪೊಪ್ಪಿಗೆ ವೇಳೆ ದರ್ಶನ್ ಅವರ ಹೆಸರನ್ನು ಸಹ ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಇತರ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಕಾಮಾಕ್ಷಿ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.