ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈ ವರ್ಷ ಎರಡು ಲಕ್ಷ ಸಸಿಗಳನ್ನು ನೆಡಲು ಗುರಿ ಹೊಂದಲಾಗಿದೆ ಎಂದು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್ ಅವರು ಮಂಗಳವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರವನ್ನು ಹಸಿರಾಗಿಡಲು ‘ಬ್ಲೂ ಗ್ರೀನ್ ಊರು’ ಎಂಬ ಅಭಿಯಾನ ಆರಂಭಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮರಗಳನ್ನು ನೆಡಲು ಸಿದ್ಧತೆ ಮಾಡಲಾಗಿದೆ. ಜೊತೆಗೆ, ಕ್ಲೈಮೆಟ್ ಆ್ಯಕ್ಷನ್ ಸೆಲ್ ಕೂಡ ರಚಿಸಲಾಗಿದೆ. ಇದರಲ್ಲಿ ಜಲ ಮಂಡಳಿ, ಬೆಸ್ಕಾಂ, ಬಿಎಂಟಿಸಿ, ಬಿಟಿಪಿ, ಬಿಎಂಆರ್‌ಸಿಎಲ್, ಡೆಲ್ಟ್, ಘನತ್ಯಾಜ್ಯ ನಿರ್ವಹಣೆ, ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ, ಕೈಗಾರಿಕೆ, ಗಣಿಗಾರಿಗೆ ಸೇರಿದಂತೆ ಎಲ್ಲ ಇಲಾಖೆಗಳನ್ನು ಸೇರಿಸಲಾಗಿದೆ. ಈ ಮಾಹಿತಿ ಬಿಬಿಎಂಪಿ ಜಾಲತಾಣದಲ್ಲಿ ಲಭ್ಯವಿದೆ ಎಂದು ಹೇಳಿದರು.
ಶಾಲಾ ಮಕ್ಕಳು ತಮ್ಮ ಪ್ರದೇಶದಲ್ಲಿ ಗಿಡ ನೆಟ್ಟು ಬೆಳೆಸುವ ಹಸಿರು ರಕ್ಷಕ ಕಾರ್ಯಕ್ರಮವನ್ನು ಕಳೆದ ವರ್ಷ ಅನಾವರಣ ಮಾಡಲಾಗಿತ್ತು. 250 ಶಾಲೆಗಳ ಸಹಯೋಗದಲ್ಲಿ ಈಗಾಗಲೇ 52 ಸಾವಿರ ಗಿಡಗಳನ್ನು ನೆಡಲಾಗಿದೆ. ಈ ಪೈಕಿ, ಶೇ 80ರಷ್ಟು ಗಿಡಗಳು ಉಳಿದುಕೊಂಡಿವೆ. ಶೇ 20ರಷ್ಟು ಬದಲಿ ಗಿಡ ನೆಡಲಾಗುವುದು. ಈ ಕಾರ್ಯಕ್ರಮದ ಭಾಗವಾಗಿ ಈ ವರ್ಷ ಹೆಚ್ಚಿನ ಶಾಲೆಗಳನ್ನು ಸೇರಿಸಿಕೊಂಡು 2 ಲಕ್ಷ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಶಾಲೆಗಳು ಪಾಲಿಕೆ ಜತೆ ಒಡಂಬಡಿಕೆ ಮಾಡಿಕೊಂಡಿದ್ದು, ಈ ಗಿಡಗಳು ಆರೋಗ್ಯಕರವಾಗಿ ಬೆಳೆಯುತ್ತಿವೆಯೇ ಎಂದು ಪರಿಶೀಲಿಸಲು ಮೊಬೈಲ್ ತಂತ್ರಾಂಶ ಸಿದ್ಧಪಡಿಸಲಾಗಿದೆ.
ಬಿಬಿಎಂಪಿ ವತಿಯಿಂದ ವಲಯವಾರು ಮರಗಣತಿ ಮಾಡಲು ಟೆಂಡರ್ ಕರೆಯಲಾಗಿದೆ. ಬೊಮ್ಮನಹಳ್ಳಿ ವಲಯದ ವಿದ್ಯಾಪೀಠ, ಕತ್ತರಿಗುಪ್ಪೆ ವಾರ್ಡ್‌ಗಳಲ್ಲಿ ಈಗಾಗಲೇ 94 ಸಾವಿರ ಮರಗಳ ಸರಿಯಾದ ಬೆಳವಣಿಗೆಗೆ ಕ್ರಮ ಕೈಗೊಳ್ಳಲಾಗಿದೆ. ಅಂತರ್ಜಲ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿರುವ ತೆರೆದ ಬಾವಿಗಳ ಮಾಹಿತಿ ಪಡೆದು ಅಭಿವೃದ್ಧಿಪಡಿಸಲಾಗುವುದು. ನಗರದಲ್ಲಿ ಏಳು ಸಾವಿರ ಕೊಳವೆ ಬಾವಿಗಳು ಬತ್ತಿದ್ದವು. ಅವುಗಳ ಪುನಶ್ಚೇತನಕ್ಕಾಗಿ ಕೆರೆಗಳಿಗೆ ಸಂಸ್ಕರಿಸಿದ ನೀರು ತುಂಬಿಸಲು ನಿರ್ಧರಿಸಲಾಗಿದೆ’ ಎಂದರು.