ಬೆಂಗಳೂರು: ಟ್ರಿನಿಟಿ ಮೆಟ್ರೊ ನಿಲ್ದಾಣದಲ್ಲಿ ಗುರುವಾರ ಬೆಳಗ್ಗೆ ಪೀಕ್ ಅವಧಿಯಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಪ್ರಯಾಣಿಕರು ಒಂದು ತಾಸಿಗೂ ಹೆಚ್ಚು ಸಮಯ ರೈಲಿಗೆ ಕಾಯಬೇಕಾಯಿತು. ಕಚೇರಿಗೆ ಹೋಗುವ ಸಮಯದಲ್ಲೇ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಉದ್ಯೋಗಿಗಳು ನಿಲ್ದಾಣದಲ್ಲೇ ನಿಂತು ಪರದಾಡುವಂತಾಯಿತು.
ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಲ್ಲಿ ಮೆಟ್ರೋ ರೈಲು ಕೆಟ್ಟು ನಿಂತ ಹಿನ್ನೆಲೆಯಲ್ಲಿ ನೂರಾರು ಪ್ರಯಾಣಿಕರು ತಮ್ಮಕೆಲಸ ಕಾರ್ಯಗಳಿಗೆ ತೆರಳಲು ವಿಳಂಬವಾಯಿತು. ಬೆಳಗ್ಗೆ 9. 58ಕ್ಕೆ ಮೆಟ್ರೋ ರೈಲು ತಾಂತ್ರಿಕ ದೋಷದಿಂದ ಕೆಟ್ಟು ನಿಂತಿತ್ತು, ಆದರೆ ಬಿಎಂಆರ್ ಸಿಎಲ್ 11.30 ಕ್ಕೆ ಪ್ರಯಾಣಿಕರಿಗೆ ಮಾಹಿತಿ ನೀಡಿದೆ. ಪದೇ ಪದೇ ರೈಲು ಕೆಟ್ಟು ನಿಂತು ವಿಳಂಬವಾಗುತ್ತಿರುವುದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇಂದು ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ಅಡಚಣೆಯಿಂದಾಗಿ ಬೆಳಗ್ಗೆ 9.58 ಕ್ಕೆ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಯಿತು ಮತ್ತು ನಂತರ ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಲ್ಲಿ ದೋಷಯುಕ್ತ ರೈಲನ್ನು ಪಾಕೆಟ್ ಟ್ರ್ಯಾಕ್‌ಗೆ ಕೊಂಡೋಯ್ಯಲಾಯಿತು. ಈಗ ರೈಲು ಸೇವೆ ಎಂದಿನಂತೆ ಆರಂಭಿಸಲಾಗಿದೆ. ಉಂಟಾದ ಅನಾನುಕೂಲತೆಗಾಗಿ ವಿಷಾದಿಸುತ್ತೇವೆ ಎಂದು ಬಿಎಂಆರ್ ಸಿಎಲ್ ಟ್ವೀಟ್ ಮಾಡಿದೆ.