ಚಿತ್ರದುರ್ಗ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ತಮ್ಮ ಪುತ್ರ ಪೊಲೀಸರಿಗೆ ಶರಣಾಗಿರುವ ಸುದ್ದಿ ತಿಳಿದು ಆರೋಪಿ ಅನುಕುಮಾರ್ ತಂದೆ ಚಂದ್ರಪ್ಪ (60) ಕುಸಿದುಬಿದ್ದು ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ.
ಸಿಹಿ ನೀರು ಹೊಂಡ ಎಂಬಲ್ಲಿ ಈ ಘಟನೆ ನಡೆದಿದೆ. ಕುಸಿದುಬೀಳುತ್ತಿದ್ದಂತೆಯೇ ಚಂದ್ರಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಕಡಿಮೆ ರಕ್ತದೊತ್ತಡದಿಂದಾಗಿ ಹೃದಯ ಸ್ತಂಭನ ಸಂಭವಿಸಿ ಅವರು ಸಂಜೆ 7 ಗಂಟೆ ವೇಳೆಗೆ ಮೃತಪಟ್ಟಿದ್ದಾರೆ.
ಒಂದೆಡೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಅನುಕುಮಾರ್ ಪೊಲೀಸರ ಮುಂದೆ ಶರಣಾಗಿದ್ದರೆ ಮತ್ತೊಂದೆಡೆ ಅವರ ತಂದೆ ಚಂದ್ರಪ್ಪ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಆಟೋ ಚಾಲಕನಾಗಿದ್ದ ಅನುಕುಮಾರ್ ಕುಟುಂಬದಲ್ಲಿ ದುಡಿಯುತ್ತಿದ್ದ ಏಕೈಕ ವ್ಯಕ್ತಿಯಾಗಿದ್ದು ಅವರು ಕುಟುಂಬದ ಆಧಾರವಾಗಿದ್ದರು.
ಮಗನ ಬಂಧನ ಮತ್ತು ಪತಿ ಚಂದ್ರಪ್ಪನ ಸಾವಿನಿಂದ ಅನುಕುಮಾರ್ ಅವರ ತಾಯಿ ಜಯಮ್ಮ ತೀವ್ರ ಅಘಾತಕ್ಕೆ ಒಳಗಾಗಿ, ನಡೆದ ಘಟನೆಗಳಿಗೆ ದರ್ಶನ್‌ಗೆ ಶಾಪ ಹಾಕುತ್ತಿದ್ದದ್ದು ಕಂಡುಬಂದಿತು.
ತನ್ನ ಮಗ ನಿರಪರಾಧಿಯಾಗಿದ್ದು, ಆತನನ್ನು ಬಿಡುಗಡೆ ಮಾಡುವಂತೆ ಪೊಲೀಸರನ್ನು ಜಯಮ್ಮ ವಿನಂತಿಸುತ್ತಿದ್ದರು.