ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಟ ದರ್ಶನ್ ತೂಗುದೀಪ ಅವರ ಪರವಾಗಿ ರಾಜ್ಯ ಸರ್ಕಾರವು ಪ್ರಭಾವಿಗಳ ಒತ್ತಡಕ್ಕೆ ಒಳಗಾಗಿದೆ ಎಂಬ ವರದಿಗಳನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶುಕ್ರವಾರ ತಳ್ಳಿಹಾಕಿದ್ದಾರೆ.
ಪೋಕ್ಸೊ ಪ್ರಕರಣದಲ್ಲಿ ಬಿಜೆಪಿ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಬಂಧನ ವಾರಂಟ್ ಜಾರಿಯಾದ ನಂತರ, ಕಾಂಗ್ರೆಸ್ ಸರ್ಕಾರ ಬಿಎಸ್‌ವೈ ವಿರುದ್ಧ ದ್ವೇಷ ರಾಜಕಾರಣ ನಡೆಸುತ್ತಿದೆ ಎಂಬ ಬಿಜೆಪಿ ನಾಯಕರ ಆರೋಪಗಳನ್ನು ಅವರು ತಳ್ಳಿಹಾಕಿದರು.
ದರ್ಶನ್ ಪ್ರಕರಣದಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, 'ಯಾರ ಒತ್ತಡವೂ ಇಲ್ಲ, ನಮ್ಮ ಗೃಹ ಸಚಿವರಾಗಲಿ ಅಥವಾ ಬೇರೆಯವರಾಗಲಿ ಇದರಲ್ಲಿ (ತನಿಖೆ) ಭಾಗಿಯಾಗಿಲ್ಲ. ನಾವು ಯಾವುದನ್ನೂ ಶಿಫಾರಸು ಮಾಡುತ್ತಿಲ್ಲ, ನಮಗೆ ಏನೂ ತಿಳಿದಿಲ್ಲ ಎಂದು ಹೇಳಿದರು.
ನಟ ದರ್ಶನ್ ಅವರಿಗೆ ಪೊಲೀಸ್ ಠಾಣೆಯಲ್ಲಿ 'ರಾಯಲ್ ಟ್ರೀಟ್‌ಮೆಂಟ್' ನೀಡಲಾಗುತ್ತಿದೆ ಮತ್ತು 'ಗೌಪ್ಯತೆ' ಕಾಪಾಡಲು ಅಲ್ಲಿ ಶಾಮಿಯಾನವನ್ನು ಹಾಕಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, 'ನಾನು ಪೊಲೀಸರಲ್ಲಿ ವಿಚಾರಿಸಿದ್ದೇನೆ. ಅಲ್ಲಿ (ಪೊಲೀಸ್ ಠಾಣೆಯಲ್ಲಿ) 13 ಆರೋಪಿಗಳಿದ್ದಾರೆ. ನೀವು (ಮಾಧ್ಯಮ) ಬೆಳಿಗ್ಗೆಯಿಂದ ಸಂಜೆಯವರೆಗೆ ನಿಮ್ಮ ಕ್ಯಾಮೆರಾಗಳೊಂದಿಗೆ ಅಲ್ಲಿ ನಿಂತಿದ್ದೀರಿ. ಮುಕ್ತವಾಗಿ ಕೆಲಸ ಮಾಡಲು ಪೊಲೀಸರಿಗೆ ಅವಕಾಶ ಬೇಕು. ಆದ್ದರಿಂದಲೇ ಅವರು ಅಲ್ಲಿ ಶಾಮಿಯಾನ ಹಾಕಿದ್ದಾರೆ ಎಂದರು.
ನಟನ ಅಭಿಮಾನಿಯಾಗಿದ್ದ ಚಿತ್ರದುರ್ಗದ ನಿವಾಸಿ 33 ವರ್ಷದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲೆಂಜಿಂಗ್ ಸ್ಟಾರ್ ಎಂದೇ ಖ್ಯಾತರಾಗಿರುವ ದರ್ಶನ್ ಮತ್ತು ಅವರ ಸಹಚರರನ್ನು ಮಂಗಳವಾರ ಬಂಧಿಸಲಾಗಿದೆ. ದರ್ಶನ್ ಗೆಳತಿ ಪವಿತ್ರಾ ಗೌಡ ಅವರಿಗೆ ಮಾಡಿರುವ ಸಂದೇಶದಲ್ಲಿ ರೇಣುಕಾಸ್ವಾಮಿ ಅವರು ಅಸಭ್ಯ ಭಾಷೆ ಬಳಸಿದ್ದಾರೆ ಮತ್ತು ಆಕ್ಷೇಪಾರ್ಹ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಯಡಿಯೂರಪ್ಪ ವಿರುದ್ಧದ ಪ್ರಕರಣ ಮತ್ತು ಬಂಧನ ವಾರೆಂಟ್‌ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಸರಿ ಪಕ್ಷದ ಪ್ರಕರಣದ ಬಗ್ಗೆ ಪ್ರಶ್ನಿಸಿದರು.
ನಾನು ಅದರ (ಪ್ರಕರಣ) ಬಗ್ಗೆ ಆಳವಾಗಿ ಮಾತನಾಡುವುದಿಲ್ಲ. ಕಾಂಗ್ರೆಸ್ ಪಕ್ಷವು ಯಾರನ್ನೂ ದ್ವೇಷಿಸುವುದಿಲ್ಲ, ನಾನು ದ್ವೇಷದ ರಾಜಕಾರಣದ ಬಗ್ಗೆ ಮಾತನಾಡಿದರೆ ಅದು ಬೇರೆಡೆ ಹೋಗುತ್ತದೆ. ಆದ್ದರಿಂದ ನಾನು ಮಾತನಾಡಲು ಬಯಸುವುದಿಲ್ಲ. ನನಗೆ ಅನುಕಂಪವಿದೆ (ಯಡಿಯೂರಪ್ಪ ಬಗ್ಗೆ) , ಏಕೆಂದರೆ ನನಗೂ ಅದರ ನೋವು ತಿಳಿದಿದೆ ಎಂದು ಅವರು ಹೇಳಿದರು.
'ಬಿಜೆಪಿ ರಾಹುಲ್ ಗಾಂಧಿ ವಿರುದ್ಧ ದಾಖಲಿಸಿರುವ ಕೇಸು ಯಾವ ರೀತಿಯ ರಾಜಕೀಯ. ಬಿಜೆಪಿಯವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಜಾಹೀರಾತು ಕೊಟ್ಟಿದ್ದಾರಾ? ರಾಹುಲ್ ಗಾಂಧಿ ಎಐಸಿಸಿ ಅಥವಾ ಕೆಪಿಸಿಸಿ ಅಧ್ಯಕ್ಷರೇ? ಅವರು ಯಾವುದೇ ಜಾಹೀರಾತು ನೀಡಿಲ್ಲ. ಪತ್ರಿಕೆಗಳಲ್ಲಿ ಪ್ರಕಟವಾದ ಯತ್ನಾಳ್ (ಬಿಜೆಪಿ ಶಾಸಕ) ಹೇಳಿಕೆಯನ್ನು ಆಧರಿಸಿ ನಮ್ಮ ಕೆಪಿಸಿಸಿ ಇದನ್ನು ನೀಡಿದೆ. ಬಿಜೆಪಿಯವರು ನಮ್ಮ ಮೇಲೆ ಕೇಸು ಹಾಕಿಲ್ಲವೇ? ನಾವು ನ್ಯಾಯಾಲಯಕ್ಕೆ ಹೋಗಲಿಲ್ಲವೇ? ಅದನ್ನು ಏನೆಂದು ಕರೆಯುತ್ತಾರೆ? ವಿಜಯೇಂದ್ರ (ರಾಜ್ಯ ಬಿಜೆಪಿ ಮುಖ್ಯಸ್ಥ) ಅವರಿಗೆ ಪ್ರಕರಣ ದಾಖಲಿಸುವ ಕಾಮನ್ ಸೆನ್ಸ್ ಇರಲಿಲ್ಲವೇ? ಎಂದು ಪ್ರಶ್ನಿಸಿದರು.