ಗದಗ: ಉತ್ತರ ಕರ್ನಾಟಕದಲ್ಲಿ ಸುರಿಯುತ್ತಿರುವ ವರ್ಷಧಾರೆಗೆ ಅಲ್ಲಿ ಬೆಟ್ಟಗುಡ್ಡಗಳಲ್ಲಿ ತಾತ್ಕಾಲಿಕ ಜಲಪಾತಗಳನ್ನು ಸೃಷ್ಟಿ ಮಾಡಿದೆ.
ಹೌದು.. ಉತ್ತರ ಕರ್ನಾಟಕದಲ್ಲಿ ಸುರಿಯುತ್ತಿರುವ ಭಾರಿ ಮಳೆ ಅಲ್ಲಿನ ಬೆಟ್ಟಗುಡ್ಡಗಳಲ್ಲಿ ಕೃತಕ ಜಲಪಾತಗಳನ್ನು ಸೃಷ್ಟಿಸಿದ್ದು, ಅಂತೆಯೇ ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ಶ್ರೀ ಕಾಲಕಾಲೇಶ್ವರ ಬೆಟ್ಟದಲ್ಲಿ ತಾತ್ಕಾಲಿಕ ಜಲಪಾತ ಸೃಷ್ಟಿಯಾಗಿದೆ. ಈ ಸುಂದರ ಸೊಬಗನ್ನು ಸವಿಯಲು ಪ್ರವಾಸಿಗರು ಸಾಗರೋಪಾದಿಯಾಗಿ ಹರಿದುಬರುತ್ತಿದ್ದಾರೆ.
ಗಜೇಂದ್ರಗಡದಿಂದ 3 ಕಿ.ಮೀ ದೂರದಲ್ಲಿರುವ ಕಾಲಕಾಲೇಶ್ವರ ಪರ್ವತಗಳ ತಪ್ಪಲಿನಲ್ಲಿ ಈ ಸುಂದರ ಜಲಪಾತ ಸೃಷ್ಟಿಯಾಗಿದ್ದು, ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಕಾಲಕಾಲೇಶ್ವರ ಕ್ಷೇತ್ರವೂ ಮತ್ಸ್ಯದ ಮೇಲಿನ ಕೈಲಾಸದಂತೆ ಕಂಗೊಳಿಸುತ್ತಿದೆ. ಪ್ರಕೃತಿ ನಿರ್ಮಿತ ಸೌಂದರ್ಯದ ಮಡಿಲಿನಲ್ಲಿ ಏಕಶಿಲೆ ಬೆಟ್ಟ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.
ಈ ವಿಡಿಯೋವನ್ನು ಟ್ವಿಟರ್ ನಲ್ಲಿ @Veerayya_S_S ಎಂಬುವವರು ಅಪ್ಲೋಡ್ ಮಾಡಿದ್ದು, ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಏಕಶಿಲೆ ಬೆಟ್ಟದ ತುದಿಯಲ್ಲಿ ಸ್ವಯಂಭುಲಿಂಗ ಸ್ವರೂಪಿ, ದಕ್ಷಿಣ ಕಾಶಿ ಶ್ರೀ ಕಾಲಕಾಲೇಶ್ವರ ದೇವಸ್ಥಾನವಿದೆ.