ಬೆಂಗಳೂರು: ಅಮೇರಿಕಾದ ಸೆಮಿಕಂಡಕ್ಟರ್ ಸಂಸ್ಥೆ ಮೈಕ್ರೋನ್ ಗೆ ಸಹಾಯಧನ ನೀಡುವುದನ್ನು ಪ್ರಶ್ನಿಸಿದ್ದ ಕೇಂದ್ರ ಬೃಹತ್ ಕೈಗಾರಿಕೆ, ಉಕ್ಕು ಸಚಿವ ಹೆಚ್ ಡಿ ಕುಮಾರಸ್ವಾಮಿ, ಈ ವಿಷಯದಲ್ಲಿ ತಮ್ಮ ಹೇಳಿಕೆಯನ್ನು ಬದಲಾವಣೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಸೆಮಿಕಂಡಕ್ಟರ್ ಕಾರ್ಯತಂತ್ರದ ಉದ್ಯಮವಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಆಟೋಮೊಬೈಲ್ ಉತ್ಪಾದನೆಗೆ ಇದು ಮೂಲಭೂತ ಅವಶ್ಯಕತೆಯಾಗಿದೆ. ಈ ಎರಡೂ ಕ್ಷೇತ್ರಗಳು ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸುತ್ತವೆ. ಪ್ರಧಾನಿ ಕೈಗೊಂಡಿರುವ ಸೆಮಿಕಂಡಕ್ಟರ್ ಸಂಬಂಧಿತ ಉಪಕ್ರಮಗಳನ್ನು ನಾನು ಬಹಳವಾಗಿ ಪ್ರಶಂಸಿಸುತ್ತೇನೆ ಮತ್ತು ನನ್ನ ಸಚಿವಾಲಯದ ಮೂಲಕ ಅವುಗಳನ್ನು ಪೂರೈಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.
ಜೂನ್ 14 ರಂದು ಪ್ರಕಟವಾದ ಮಾಧ್ಯಮ ವರದಿಯ ಪ್ರಕಾರ, ಅವರು ಗುಜರಾತ್‌ನಲ್ಲಿ US-ಮೂಲದ ಮೈಕ್ರಾನ್ ಟೆಕ್ನಾಲಜಿಯಿಂದ $ 2.5 ಶತಕೋಟಿ ಸೆಮಿಕಂಡಕ್ಟರ್ ಘಟಕದಂತಹ ಹೂಡಿಕೆಗೆ ಸಂಬಂಧಿಸಿದ ಸಭೆಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿದ್ದರು, ಈ ಯೋಜನೆ ಪ್ರತಿ ಉದ್ಯೋಗಕ್ಕೆ 3.2 ಕೋಟಿ ರೂಪಾಯಿಗಳ ಸಬ್ಸಿಡಿಗಳನ್ನು ಪಡೆಯುವ ಸಾಧ್ಯತೆ ಇದೆ ಈ ಸಬ್ಸಿಡಿಯ ಬಗ್ಗೆ ಕುಮಾರಸ್ವಾಮಿ ಪ್ರಶ್ನಿಸಿದ್ದರು.
ಮೈಕ್ರಾನ್ ಟೆಕ್ನಾಲಜಿ ಗುಜರಾತ್‌ನಲ್ಲಿ ₹22,976 ಕೋಟಿ (2.75 ಬಿಲಿಯನ್ ಡಾಲರ್) ಹೂಡಿಕೆ ಮಾಡುತ್ತಿದೆ. ಅದಕ್ಕೆ ಕೇಂದ್ರ (ಶೇ 50) ಹಾಗೂ ರಾಜ್ಯ ಸರ್ಕಾರ ನೀಡುತ್ತಿರುವ ಸಹಾಯಧನ ಶೇ 70ರಷ್ಟಿದೆ. ಕಂಪನಿ 5 ಸಾವಿರ ಉದ್ಯೋಗ ನೀಡುವ ಭರವಸೆ ನೀಡಿದೆ. ದೊರೆಯಲಿರುವ ಉದ್ಯೋಗ, ನೀಡುವ ಸಹಾಯಧನ ಲೆಕ್ಕ ಹಾಕಿದರೆ ಪ್ರತಿ ಉದ್ಯೋಗಕ್ಕೆ ₹3.2 ಕೋಟಿ ವೆಚ್ಚವಾಗುತ್ತದೆ. ಒಂದು ಉದ್ಯೋಗಕ್ಕೆ ಅಷ್ಟು ಹಣ ನೀಡುವುದು ಸರಿಯೇ? ಎಂದು ಸಭೆಯಲ್ಲೇ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದೆ ಎಂದು ಹೆಚ್ ಡಿಕೆ ಹೇಳಿದ್ದರು.
ಆದರೆ ಈಗ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿರುವ HDK ಮಾಧ್ಯಮಗಳು ತಮ್ಮ ಹೇಳಿಕೆಯನ್ನು ಸರಿಯಾಗಿ ಗ್ರಹಿಸಿಲ್ಲ ಎಂದು ಹೇಳಿದ್ದಾರೆ.