ಬೆಂಗಳೂರು: ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನಟಿ ಪವಿತ್ರಾ ಗೌಡ ಸಂತ್ರಸ್ತ ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಥಳಿಸಿದ್ದಾರೆ ಎಂದು ಪೊಲೀಸರು ಇತ್ತೀಚೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಿದ ರಿಮಾಂಡ್ ನೋಟ್‌ನಲ್ಲಿ ತಿಳಿಸಿದ್ದಾರೆ.
ಕೊಲೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ನಟಿಯನ್ನು ಪ್ರಕರಣದಲ್ಲಿ ಆರೋಪಿ ನಂಬರ್ ಒನ್ ಎಂದು ಹೆಸರಿಸಲಾಗಿದ್ದು, ನಟ ದರ್ಶನ್ ತೂಗುದೀಪ ಕೊಲೆಯನ್ನು ಕಾರ್ಯಗತಗೊಳಿಸಿದ ಆರೋಪದ ಮೇರೆಗೆ ಆರೋಪಿ ನಂಬರ್ 2 ಆಗಿದ್ದಾರೆ. ಪೊಲೀಸ್ ರಿಮಾಂಡ್ ನೋಟ್‌ನಲ್ಲಿರುವ ಮಾಹಿತಿ ಪ್ರಕಾರ ರೇಣುಕಾಸ್ವಾಮಿ ಕೊಲೆಯಾದ ಸ್ಥಳದಲ್ಲಿ ಪವಿತ್ರಾ ಗೌಡ ಸ್ವತಃ ಇದ್ದರು ಎಂದು ಹೇಳಲಾಗಿದೆ. ಪವಿತ್ರಾ ಅವರ ಮನೆಯಿಂದ ದರ್ಶನ್‌ಗೆ ಸಂಬಂಧಿಸಿದ ಚಪ್ಪಲಿ, ಬಟ್ಟೆ, ಸಾಮಗ್ರಿಗಳು ಮತ್ತು ಇತರ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿ 15 ಮಂದಿಯನ್ನು ಬಂಧಿಸಲಾಗಿದೆ. ತನಿಖೆಯ ಭಾಗವಾಗಿ, ರೇಣುಕಾಸ್ವಾಮಿ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹಂಚಿಕೊಂಡ ಮತ್ತು ಡಿಲೀಟ್ ಮಾಡಲಾದ ಸಂದೇಶಗಳಿಗೆ ಸಂಬಂಧಿಸಿದ ಡೇಟಾವನ್ನು ರಿಟ್ರೀವ್ ಮಾಡಲು ಪೊಲೀಸರು ಇನ್ ಸ್ಟಾಗ್ರಾಮ್ ಮಾತೃಸಂಸ್ಥೆ ಮೆಟಾವನ್ನು ಸಂಪರ್ಕಿಸಲು ಯೋಚಿಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹತ್ಯೆಯ ಆರೋಪದ ನಂತರ ದರ್ಶನ್ ಹಲವು ವ್ಯಕ್ತಿಗಳನ್ನು ಸಂಪರ್ಕಿಸಿದ್ದರು ಎಂದು ಪೊಲೀಸರು ತಿಳಿಸಿದ್ದು, ಸಂತ್ರಸ್ತ ರೇಣುಕಾಸ್ವಾಮಿಗೆ ವಿದ್ಯುತ್ ಶಾಕ್ ನೀಡಲಾಗಿದೆ ಎಂದು ಮತ್ತೊಬ್ಬ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಪ್ರಕರಣದ ಒಂಬತ್ತನೇ ಆರೋಪಿಯಾಗಿರುವ ದರ್ಶನ್ ಅವರ ಗ್ಯಾಂಗ್ ಸದಸ್ಯ ಧನರಾಜ್ ಡಿ ಅಲಿಯಾಸ್ ರಾಜ ರೇಣುಕಾಸ್ವಾಮಿಗೆ ವಿದ್ಯುತ್ ಶಾಕ್ ನೀಡಿದ್ದಾನೆ ಎಂದು ಹೇಳಲಾಗಿದೆ. ಆತನ ಮನೆಯಿಂದ ಎಲೆಕ್ಟ್ರಿಕ್ ಶಾಕ್ ಟಾರ್ಚ್' ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಂತೆಯೇ ಕೊಲೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ದರ್ಶನ್ ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದರು. ಇದಕ್ಕಾಗಿ ಸ್ನೇಹಿತನಿಂದ 40 ಲಕ್ಷ ರೂಪಾಯಿ ತೆಗೆದುಕೊಂಡಿದ್ದರು ಎನ್ನಲಾಗಿದೆ. ಈ ಹಣವನ್ನೂ ಕೂಡ ಪೊಲೀಸರು ಇದೀಗ ವಶಪಡಿಸಿಕೊಂಡಿದ್ದಾರೆ. ಗುರುವಾರ 24ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದ ರಿಮಾಂಡ್ ನೋಟ್ ನಲ್ಲಿ ದರ್ಶನ್ ಮತ್ತು ಇತರ ಮೂವರನ್ನು ಪೊಲೀಸ್ ಕಸ್ಟಡಿ ಮತ್ತು ಅವರ ಸ್ನೇಹಿತೆ ಪವಿತ್ರಾ ಮತ್ತು ಅವರ ನ್ಯಾಯಾಂಗ ಬಂಧನಕ್ಕೆ ಕೋರಿದಾಗ ಅಧಿಕಾರಿಗಳು ತನಿಖೆಯ ಕುರಿತು ಅಪ್ ಡೇಟ್ಸ್ ಹಂಚಿಕೊಂಡಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ನಟ ದರ್ಶನ್ ಅಭಿಮಾನಿಯಾದ ರೇಣುಕಾಸ್ವಾಮಿ ಪವಿತ್ರಾಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದರು, ಇದು ದರ್ಶನ್‌ಗೆ ಕೋಪತರಿಸಿತ್ತು ಮತ್ತು ಕೊಲೆಗೆ ಸಂಚು ರೂಪಿಸಲು ಮತ್ತು ಕಾರ್ಯಗತಗೊಳಿಸಲು ಕಾರಣವಾಯಿತು ಎಂದು ಆರೋಪಿಸಲಾಗಿದೆ. ಜೂನ್ 9 ರಂದು ಇಲ್ಲಿನ ಸುಮನಹಳ್ಳಿಯ ಅಪಾರ್ಟ್‌ಮೆಂಟ್ ಪಕ್ಕದ ಮಳೆನೀರು ಚರಂಡಿ ಬಳಿ ರೇಣುಕಾಸ್ವಾಮಿ ಶವ ಪತ್ತೆಯಾಗಿತ್ತು. ಜೂನ್ 8 ರಂದು ಆತನನ್ನು ಚಿತ್ರಹಿಂಸೆ ನೀಡಿ ಸಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ನಟ ದರ್ಶನ್ ಮತ್ತು ಇತರ ಆರೋಪಿಗಳಾದ ಧನರಾಜ್ ಡಿ, ವಿನಯ್ ವಿ ಮತ್ತು ಪ್ರದೋಶ್ ತನಿಖೆಗೆ ಸಹಕರಿಸುತ್ತಿಲ್ಲ ಮತ್ತು ಸತ್ಯವನ್ನು ಮರೆಮಾಚಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನ್ಯಾಯಾಲಯ ಗುರುವಾರ ನಾಲ್ವರ ಪೊಲೀಸ್ ಕಸ್ಟಡಿಯನ್ನು ಜೂನ್ 22 ರವರೆಗೆ ಎರಡು ದಿನಗಳ ಕಾಲ ವಿಸ್ತರಿಸಿದೆ. ಉಳಿದವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿ ನಂಬರ್ ಒನ್ ಪವಿತ್ರಾ ರೇಣುಕಾಸ್ವಾಮಿ ಹತ್ಯೆಗೆ ‘ಪ್ರಮುಖ ಕಾರಣ’ ಎಂದು ಗುರುತಿಸಿರುವ ಪೊಲೀಸರು, ಇತರ ಆರೋಪಿಗಳಿಗೆ ಪ್ರಚೋದನೆ ನೀಡಿ, ಅವರೊಂದಿಗೆ ಸಂಚು ರೂಪಿಸಿ, ಅಪರಾಧದಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಸಾಬೀತಾಗಿದೆ ಎಂದು ತಿಳಿಸಿದ್ದಾರೆ. ದರ್ಶನ್ ತಮ್ಮ ಹಣ, ಇತರೆ ಆರೋಪಿಗಳು ಹಾಗೂ ಅಭಿಮಾನಿ ಬಳಗವನ್ನು ಬಳಸಿಕೊಂಡು ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವುದು ಲಭ್ಯವಿರುವ ಸಾಕ್ಷ್ಯಾಧಾರಗಳಿಂದ ಪತ್ತೆಯಾಗಿದೆ. ತನಿಖೆಯ ಸಮಯದಲ್ಲಿ, ಆರೋಪಿ ಧನರಾಜ್ ತನ್ನ ಸ್ವಯಂಪ್ರೇರಿತ ಹೇಳಿಕೆಯಲ್ಲಿ, ತಾನು ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದೇನೆ ಮತ್ತು ಆತನಿಗೆ 'ವಿದ್ಯುತ್ ಶಾಕ್ ಟಾರ್ಚ್' ಬಳಸಿ ಶಾಕ್ ನೀಡಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.
ಆದರೆ ಆತ ಆ ಸಾಧನವನ್ನು ಎಲ್ಲಿಂದ ಪಡೆದುಕೊಂಡಿದ್ದ ಎಂಬ ಮಾಹಿತಿಯನ್ನು ಮರೆಮಾಡಿದ್ದು, ಈವರೆಗೆ ಬಹಿರಂಗಪಡಿಸಿಲ್ಲ. ಅವರನ್ನು ಹೆಚ್ಚಿನ ತನಿಖೆ ನಡೆಸಬೇಕಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ. ಅಪರಾಧದ ನಂತರ ದರ್ಶನ್ ಹಲವರನ್ನು ಸಂಪರ್ಕಿಸಿದ್ದು, ಅದರ ಹಿಂದಿನ ಉದ್ದೇಶ ಮತ್ತು ಕಾರಣಗಳನ್ನು ಕಂಡುಹಿಡಿಯಲು ಅವರ ಉಪಸ್ಥಿತಿಯಲ್ಲಿ ವಿಚಾರಣೆ ನಡೆಸಬೇಕಾಗಿದೆ. ಕೆಲವು ಪ್ರಭಾವಿ ವ್ಯಕ್ತಿಗಳು ತನಿಖೆಯಲ್ಲಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದ್ದಾರೆ ಎಂದು ಕೆಲವು ವರದಿಗಳಿವೆ. ಆದರೆ ಈ ವರದಿಗಳನ್ನು ಪೊಲೀಸರು ತಿರಸ್ಕರಿಸಿದ್ದಾರೆ.
ತಮ್ಮ ವಿರುದ್ಧದ ಪ್ರತಿಕೂಲ ಕಾನೂನು ಕ್ರಮಗಳಿಂದ ತಪ್ಪಿಸಿಕೊಳ್ಳಲು ಮತ್ತು ಪಿತೂರಿ ಮತ್ತು ಸಾಕ್ಷ್ಯ ನಾಶಪಡಿಸಲು ತಮ್ಮ ಸ್ನೇಹಿತ ಮೋಹನ್ ರಾಜ್ ಅವರಿಂದ 40 ಲಕ್ಷ ರೂಪಾಯಿ ಪಡೆದಿರುವುದಾಗಿ ದರ್ಶನ್ ಅವರು ತಮ್ಮ ಪರಿಷ್ಕೃತ ಹೇಳಿಕೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದರ್ಶನ್ ಅವರ ಮನೆಯಿಂದ 37.4 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದ್ದು, ಅವರು ಮೊತ್ತವನ್ನು ನೀಡಿದ ಅವರ ಪತ್ನಿಯಿಂದ ಇನ್ನೂ 3 ಲಕ್ಷ ರೂಪಾಯಿ ವಸೂಲಿ ಮಾಡಲಾಗಿದೆ ಎಂದು ಅವರು ಹೇಳಿದರು.
ಆರೋಪಿ ಪ್ರದೋಶ್ ಸಾಕ್ಷ್ಯ ನಾಶದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಯಾವುದೇ ಮಾಹಿತಿ ಬಹಿರಂಗ ಪಡಿಸುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಇನ್ನೊಬ್ಬ ವ್ಯಕ್ತಿಯನ್ನು ಅಪರಾಧದ ಸ್ಥಳಕ್ಕೆ ಕರೆದೊಯ್ದಿದ್ದರು, ಅವರ ಗುರುತನ್ನು ಅವರು ಬಹಿರಂಗಪಡಿಸಿಲ್ಲ; ಆತನನ್ನು ಹೆಚ್ಚಿನ ತನಿಖೆಗೆ ಒಳಪಡಿಸಬೇಕಾಗಿದೆ ಎಂದು ಅವರು ಹೇಳಿದರು. ಸಂತ್ರಸ್ತ ಮತ್ತು ಆರೋಪಿ ಸಂಖ್ಯೆ 4 ರಾಘವೇಂದ್ರನ ಮೊಬೈಲ್ ಫೋನ್‌ಗಳನ್ನು ಪ್ರದೋಶ್ ಮೋರಿಗೆ ಎಸೆದಿದ್ದಾನೆ ಎಂದು ಹೇಳಲಾಗಿದೆ ಮತ್ತು ಅವುಗಳನ್ನು ವಶಪಡಿಸಿಕೊಳ್ಳಲು ಮಾಡಿದ ಪ್ರಯತ್ನಗಳು ಫಲ ನೀಡಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.