ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರನ್ನು ಎಂಟು ದಿನ ಸಿಐಡಿ ಕಸ್ಟಡಿಗೆ ನೀಡಿ ಸೋಮವಾರ ನ್ಯಾಯಾಲಯ ಆದೇಶ ನೀಡಿದೆ. ಸದ್ಯ 14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ ಸೂರಜ್ ರೇವಣ್ಣ ಅವರನ್ನು ಜುಲೈ 1ರವರೆಗೆ ಸಿಐಡಿ ಕಸ್ಟಡಿಗೆ ಒಪ್ಪಿಸಿ ಜನಪ್ರತಿನಿದಿಗಳ ವಿಶೇಷ ನ್ಯಾಯಾಲಯದಿಂದ ಆದೇಶ ಪ್ರಕಟಿಸಿದೆ.
ಈ ಮಧ್ಯೆ ಸೂರಜ್ ರೇವಣ್ಣ ವಿರುದ್ಧ ದೂರು ದಾಖಲಿಸಿದ್ದ ಅವರ ಆಪ್ತ ಶಿವಕುಮಾರ್ ನಾಪತ್ತೆಯಾಗಿದ್ದು, ಅವರಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ಮಾತನಾಡದಂತೆ ಸೂರಜ್ ರೇವಣ್ಣ ಮತ್ತು ಅವರ ಆಪ್ತರಿಂದ ಪದೇ ಪದೇ ಜೀವ ಬೆದರಿಕೆ ಹಾಕಲಾಗುತ್ತಿದೆ ಎಂದು ಶಿವಕುಮಾರ್ ಆರೋಪಿಸಿದ್ದಾರೆ.
ವಾಟ್ಸಾಪ್ ಚಾಟ್ ನಲ್ಲಿ ಲವ್ ಸಂಕೇತದೊಂದಿಗೆ ಫಾರ್ಮ್ ಹೌಸ್ ಗೆ ಆಹ್ವಾನಿಸಿದ ಸೂರಜ್ ರೇವಣ್ಣ, ಲೈಂಗಿಕ ಕಿರುಕುಳ ನೀಡಿದರು. ಒಂದು ವೇಳೆ ಸಹಕರಿಸಿದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ಶಿವಕುಮಾರ್ ದಾಖಲಿಸಿರುವ ಎಫ್ ಐಆರ್ ನಲ್ಲಿ ಉಲ್ಲೇಖಿಸಿದ್ದಾರೆ. ಘಟನೆ ನಂತರ ಖಿನ್ನತೆಗೊಳಗಾಗಿದ್ದ ಸಂತ್ರಸ್ತನನ್ನು ಲಾಡ್ಜ್ ವೊಂದರಲ್ಲಿ ಕೂಡಿಹಾಕಲಾಗಿತ್ತು. ಹೇಗೂ ಅವರು ಅಲ್ಲಿಂದ ತಪ್ಪಿಸಿಕೊಂಡು ಬೆಂಗಳೂರು ತಲುಪಿದ್ದು, ಮಾಹಿತಿಯನ್ನು ಕುಟುಂಬಸ್ಥರೊಂದಿಗೆ ಹಂಚಿಕೊಂಡಾಗ ಅವರು ದೂರು ದಾಖಲಿಸಲು ಹೇಳಿದ್ದಾರೆ. ಒಂದು ವೇಳೆ ತನಗೆ ಮತ್ತು ತನ್ನ ಕುಟುಂಬದವರಿಗೆ ಏನಾದರೂ ತೊಂದರೆ ಆದಲ್ಲಿ ಅದಕ್ಕೆಲ್ಲಾ ಸೂರಜ್ ರೇವಣ್ಣ ಮತ್ತು ಅವರ ಕುಟುಂಬಸ್ಥರನ್ನೆ ಹೊಣೆಗಾರರನ್ನಾಗಿ ಮಾಡಬೇಕು ಎಂದು ಶಿವಕುಮಾರ್ ಪೊಲೀಸರಿಗೆ ಹೇಳಿದ್ದಾರೆ.