ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ KMF ಹಾಲಿನ ದರ ಮತ್ತು ಪ್ರಮಾಣವನ್ನು ಹೆಚ್ಚಿಸಿ ಪರಿಷ್ಕರಿಸಿದೆ. ಈ ಮೊದಲು ಒಂದು ಲೀಟರ್ ಮತ್ತು ಅರ್ಧ ಲೀಟರ್ ಹಾಲಿನ ಪ್ಯಾಕೆಟ್ ಕೊಡಲಾಗುತ್ತಿತ್ತು. ಇನ್ನುಂದೆ 50 ಎಂಎಲ್ ಹೆಚ್ಚುವರಿಯಾಗಿ ಸೇರಿಸಿ 1 ಲೀಟರ್ 50 ಎಂಎಲ್ ಪ್ಯಾಕೆಟ್ ನೀಡಲಾಗುತ್ತಿದ್ದು ಅದರ ದರ 42 ರೂಪಾಯಿಯಿಂದ 44 ರುಪಾಯಿಗೆ ಹೆಚ್ಚಾಗಿದೆ. ಅದೇ ರೀತಿ 550 ಎಂಎಲ್ ಹಾಲಿನ ದರ 24 ರೂಪಾಯಿಗೆ ಹೆಚ್ಚಳವಾಗಿದೆ. ಅಂದರೆ, 2 ರೂಪಾಯಿ ಏರಿಕೆ ಮಾಡಲಾಗಿದ್ದು, ನಾಳೆಯಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ. ಈ ಕ್ರಮಕ್ಕೆ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದು, ಇದಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ನಮ್ಮ ಸರ್ಕಾರ ಹಾಲಿನ ದರವನ್ನು ಹೆಚ್ಚಳ ಮಾಡಿಲ್ಲ. ಒಂದು ಲೀಟರ್ ಪ್ಯಾಕೇಟಿನಲ್ಲಿ ಇನ್ನುಮುಂದೆ 1,050 ಮಿಲೀ, ಅರ್ಧ ಲೀಟರ್ ಪ್ಯಾಕೇಟಿನಲ್ಲಿ 550 ಮಿಲೀ ಹಾಲು ದೊರೆಯಲಿದ್ದು, ಈ 50 ಮಿಲೀ ಹೆಚ್ಚುವರಿ ಹಾಲಿಗೆ ಗ್ರಾಹಕರಿಂದ 2 ರೂ. ಸಂಗ್ರಹಿಸಲಾಗುತ್ತದೆ ಎಂದು ತಿಳಿಸಿದರು. ಕಳೆದ ಕೆಲವು ತಿಂಗಳಿಂದ ಹಾಲಿನ ಉತ್ಪಾದನೆ ಗಣನೀಯ ಏರಿಕೆಯಾಗಿದ್ದು, ನಿತ್ಯದ ಸರಾಸರಿ ಉತ್ಪಾದನೆ 89 ಲಕ್ಷ ಲೀಟರ್ ನಿಂದ 1 ಕೋಟಿ ಲೀಟರ್ ಸಮೀಪಕ್ಕೆ ಬಂದಿದೆ. ಡೈರಿಗಳಲ್ಲಿ ರೈತರು ತರುವ ಹೆಚ್ಚುವರಿ ಹಾಲನ್ನು ನಿರಾಕರಿಸಬಾರದು ಜೊತೆಗೆ ಗ್ರಾಹಕರಿಗೂ ಹೊರೆಯಾಗದ ರೀತಿ ಹಾಲನ್ನು ತಲುಪಿಸುವ ಉದ್ದೇಶದಿಂದ ಕೆ.ಎಂ.ಎಫ್ ಸಂಸ್ಥೆಯು ಈ ನಿರ್ಣಯ ಕೈಗೊಂಡಿದೆ ಎಂದರು. ರಾಜ್ಯದಲ್ಲಿ ಹಾಲಿನ ದರ ಹೆಚ್ಚಳಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬೆಲೆ ಏರಿಕೆ ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಪ್ರತಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಡಿಸೆಂಬರ್ 20ರಿಂದ ಮೂರು ದಿನಗಳ ಕಾಲ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸಾಹಿತ್ಯ ಪರಿಷತ್ತಿಗೆ ಜಿಲ್ಲಾಡಳಿತ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಜಿಲ್ಲಾಡಳಿತ, ಸಾಹಿತ್ಯ ಪರಿಷತ್ತಿನವರು ಸಾಹಿತಿಗಳ ಪಟ್ಟಿ ಒದಗಿಸಿದ ನಂತರ ಸರ್ಕಾರದೊಂದಿಗೆ ಚರ್ಚಿಸಿ ಅಧ್ಯಕ್ಷರ ಹೆಸರನ್ನು ಅಂತಿಮಗೊಳಿಸಲು ತೀರ್ಮಾನಿಸಲಾಗುವುದು ಎಂದರು. 1974ರಲ್ಲಿ ಜಯದೇವಿ ತಾಯಿ ಲಿಗಾಡೆ ಅವರ ಅಧ್ಯಕ್ಷತೆಯಲ್ಲಿ ಮತ್ತು 1994ರಲ್ಲಿ ಡಾ. ಚದುರಂಗ ಅವರ ಅಧ್ಯಕ್ಷತೆಯಲ್ಲಿ ಮಂಡ್ಯದಲ್ಲಿ ಸಮ್ಮೇಳನ ಆಯೋಜಿಸಲಾಗಿತ್ತು. ಇದೀಗ ಮೂರನೇ ಬಾರಿಗೆ ಸಮ್ಮೇಳನ ಆಯೋಜಿಸಲಾಗುತ್ತಿದೆ.
ನಟ ದರ್ಶನ್ ಅಂಡ್ ಗ್ಯಾಂಗ್ ನಿಂದ ಭೀಕರವಾಗಿ ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ಅವರ ತಂದೆ, ತಾಯಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಕುಟುಂಬಕ್ಕೆ ಏಕೈಕ ಆಧಾರವಾಗಿದ್ದ ಪುತ್ರನ ಅಗಲಿಕೆಯಿಂದ ಎದುರಾಗಿರುವ ಸಂಕಷ್ಟವನ್ನು ಭೇಟಿ ವೇಳೆ ವಿವರಿಸಿದರು. ಹೀಗಾಗಿ ತಮ್ಮ ಸೊಸೆಗೆ ಸರ್ಕಾರಿ ಉದ್ಯೋಗ ಕೊಡಿಸುವಂತೆ ಮನವಿ ಮಾಡಿದರು. ಇದಕ್ಕೆ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದುಬಂದಿದೆ. ಸರ್ಕಾರವು ರೇಣುಕಾಸ್ವಾಮಿಯ ಸಾವಿಗೆ ನ್ಯಾಯ ದೊರಕಿಸುವ ಪ್ರಾಮಾಣಿಕ ಪ್ರಯತ್ನ ಮಾಡುವ ಜೊತೆಗೆ ಸರ್ಕಾರದಿಂದ ಸಾಧ್ಯವಿರುವ ಅಗತ್ಯ ನೆರವು ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಮತ್ತೊಂದೆಡೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರ ನಿರ್ಮಾಪಕ ಉಮಾಪತಿ ಗೌಡ ಮತ್ತು ನಟ ಪ್ರಥಮ್ ಗೆ ಬೆದರಿಕೆ ಹಾಕಿದ್ದ ದರ್ಶನ್ ಅಭಿಮಾನಿ ಚೇತನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಸನಾತನ ಧರ್ಮ ಅವಮಾನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಬೆಂಗಳೂರಿನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಇಂದು ವಿಚಾರಣೆಗೆ ಹಾಜರಾದರು. ಸಾಮಾಜಿಕ ಕಾರ್ಯಕರ್ತ ಪರಮೇಶ್ವರ್ ಸಲ್ಲಿಸಿದ್ದ ಅರ್ಜಿಯನ್ನು ಆಧರಿಸಿ ನ್ಯಾಯಾಲಯ ಉದಯನಿಧಿಗೆ ನೋಟಿಸ್ ಜಾರಿ ಮಾಡಿತ್ತು. ಅಲ್ಲದೇ ಖುದ್ದಾಗಿ ಹಾಜರಾಗುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರಾದ ಉದಯನಿಧಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಕಳೆದ ವರ್ಷ ಸೆಪ್ಟೆಂಬರ್ 4ರಂದು ಚೆನ್ನೈನ ತೇನಾಂಪೇಟ್ ನಲ್ಲಿ ನಡೆದಿದ್ದ ಸನಾತನ ಧರ್ಮ ನಿರ್ಮೂಲನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ್ದ ಉದಯನಿಧಿ, ಸನಾತನ ಧರ್ಮ ಡೆಂಗಿ, ಮಲೇರಿಯಾ ಹಾಗೂ ಕೊರೋನಾ ಇದ್ದಂತೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ಅದು ವಿರುದ್ಧವಾಗಿದೆ. ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು.