ಬೆಂಗಳೂರು: ತಾವು ಸಾಕಿರುವ ಪ್ರಾಣಿಗಳನ್ನು ಕೆರೆಯೊಳಗೆ ಬಿಡಬೇಡಿ ಎಂದುಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜಾನುವಾರು ಮಾಲೀಕರಿಗೆ ಎಚ್ಚರಿಕೆ ನೀಡಿದ್ದರೂ, ಅನೇಕರು ತಮ್ಮ ಜಾನುವಾರುಗಳನ್ನು ಕೆರೆಯ ಗಡಿಗಳಲ್ಲಿ ಮೇಯಲು ಬಿಡುವುದನ್ನು ಮುಂದುವರೆಸಿದ್ದಾರೆ. ಈಗ ಅಂತಹ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ.
ಮಹದೇವಪುರ ವಲಯದ ಕಾರ್ಯಪಾಲಕ ಅಭಿಯಂತರ (ಕೆರೆಗಳ) ಭೂಪ್ರದಾ ಮಾತನಾಡಿ, ವಿಜ್ಞಾನನಗರ ವಾರ್ಡ್‌ನಲ್ಲಿ ರಾತ್ರಿ ವೇಳೆ ವಿಭೂತಿಪುರ ಕೆರೆಗೆ ಅಕ್ರಮ ಪ್ರವೇಶ ಮಾಡಲು ಕಿಡಿಗೇಡಿಗಳು ಬೇಲಿ ಹಾಳು ಮಾಡಿದ್ದು, ಈಗ ಇದರ ಲಾಭ ಪಡೆದು ದನಗಳ ಮಾಲೀಕರು ಹತ್ತಾರು ಜಾನುವಾರುಗಳನ್ನು ಮುಂಜಾನೆಯೆ ಕೆರೆಗೆ ಬಿಡುತ್ತಿದ್ದಾರೆ.
ನಾವು ರವಿ ಎಂಬ ದನದ ಮಾಲೀಕನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದೆವು. ಎಫ್‌ಐಆರ್ ದಾಖಲಿಸುವ ಬದಲು ಎಚ್‌ಎಎಲ್ ಪೊಲೀಸರು ಎಚ್ಚರಿಕೆ ನೀಡಿ ವಾಪಸ್ ಕಳುಹಿಸಿದರು, ಆದರೆ ಕೆಲವೇ ದಿನಗಳಲ್ಲಿ ಜಾನುವಾರುಗಳನ್ನು ಕೆರೆಗೆ ಬಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಜಾನುವಾರು ಮಾಲೀಕರು ತಮ್ಮ ಪ್ರಾಣಿಗಳನ್ನು ಕೆರೆಗಳಿಗೆ ಬಿಡುವ ಬಗ್ಗೆ ದೂರು ನೀಡಿದರೆ ಪೊಲೀಸರು ಎಫ್‌ಐಆರ್ ದಾಖಲಿಸಬೇಕೆಂದು ನಾವು ಈಗ ಒತ್ತಾಯಿಸುತ್ತೇವೆ ಎಂದು ಅವರು ಹೇಳಿದರು. ಈ ಅಪಾಯವನ್ನು ಕೊನೆಗೊಳಿಸಲು, ಬಿಬಿಎಂಪಿಯು ವಿಭೂತಿಪುರ ಭಾಗದಲ್ಲಿ ಕಾಂಕ್ರೀಟ್ ಗೋಡೆಯನ್ನು ನಿರ್ಮಿಸುತ್ತಿದೆ ಮತ್ತು ಕೆರೆಯ ವಿಕಾಸ್ ಪಾರ್ಕ್ ಬಳಿ ಉಕ್ಕಿನ ಬೇಲಿಯನ್ನು ಹಾಕಲಿದೆ ಎಂದು ಅವರು ಹೇಳಿದರು.
ಹಸುಗಳನ್ನು ಸಂರಕ್ಷಿಸಲು ಸಾಧ್ಯವಾಗದ ಮಾಲೀಕರು ಬೆಳಿಗ್ಗೆಯಿಂದ ರಾತ್ರಿಯವರೆಗೆ ತಮ್ಮ ಪ್ರಾಣಿಗಳನ್ನು ಕೆರೆಗೆ ಕಳುಹಿಸುತ್ತಾರೆ ಎಂದು ವಾಕಿಂಗ್ ಗೆ ಬರುವ ನಾಗರಿಕರು ಮತ್ತು ಕಾರ್ಯಕರ್ತರು ಆರೋಪಿಸಿದ್ದಾರೆ. ಮಾಲೀಕರಿಗೆ ಹಸುವಿನ ಹಾಲುಕರೆಯುವಲ್ಲಿ ಮಾತ್ರ ಆಸಕ್ತಿ ಇದೆ.ಅದರ ಆಹಾರ ಮತ್ತು ಇತರ ಅಗತ್ಯಗಳಿಗಾಗಿ ಹೂಡಿಕೆ ಮಾಡುವುದಿಲ್ಲ, ಆದ್ದರಿಂದ ಅವರು ಜೌಗು ಪ್ರದೇಶಗಳಲ್ಲಿ ಪ್ರಾಣಿಗಳನ್ನು ಮೇಯಿಸಲು ಬಿಡುತ್ತಾರೆ ಎಂದಿದ್ದಾರೆ.
ಎಚ್ಚರಿಕೆ ನೀಡಿದರೂ ಅದೇ ಪ್ರವೃತ್ತಿ ಮುಂದುವರಿಸಿದರೆ ಬಿಬಿಎಂಪಿಯು ಅಂತಹ ಪ್ರಾಣಿಗಳನ್ನು ನಿರ್ದಯವಾಗಿ ಹಿಡಿದು ಸರ್ಕಾರಿ ಗೋಶಾಲೆಗಳಲ್ಲಿ ಬಿಡಬೇಕು, ಆಗ ಅಂತಹ ಮಾಲೀಕರಲ್ಲಿ ಭಯವನ್ನು ಉಂಟುಮಾಡುತ್ತದೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಹೇಳಿದರು.