ಬಿಎಸ್ ಯಡಿಯೂರಪ್ಪ 
ರಾಜ್ಯ

ಯಡಿಯೂರಪ್ಪ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ: ವಿಡಿಯೋ ಫೋಟೋ ಅಳಿಸಲು 2 ಲಕ್ಷ ರೂ.; ಸಿಐಡಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖ

ಪ್ರಕರಣದ ಮೊದಲ ಆರೋಪಿ ಬಿ.ಎಸ್. ಯಡಿಯೂರಪ್ಪ, ಎರಡನೇ ಆರೋಪಿ ವೈ.ಎಂ. ಅರುಣ್, ಮೂರನೇ ಆರೋಪಿ ಎಂ. ರುದ್ರೇಶ್ ಹಾಗೂ ನಾಲ್ಕನೇ ಆರೋಪಿ ಜಿ. ಮರಿಸ್ವಾಮಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ.

ಬೆಂಗಳೂರು: ಹದಿನೇಳು ವರ್ಷದ ವಯಸ್ಕ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ನಾಲ್ವರ ವಿರುದ್ಧ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಯಡಿಯೂರಪ್ಪ ಅವರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಇತ್ತೀಚಿಗಷ್ಟೇ ಅವರನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆ ಪಡೆದಿದ್ದ ಸಿಐಡಿ ಅಧಿಕಾರಿಗಳು, ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ತ್ವರಿತಗತಿಯ ವಿಶೇಷ ನ್ಯಾಯಾಲಯಕ್ಕೆ ಗುರುವಾರ ಚಾರ್ಜ್ ಶೀಟ್ ಸಲ್ಲಿಸಿರುವುದಾಗಿ ಮೂಲಗಳು ಹೇಳಿವೆ.

ಪ್ರಕರಣದ ಮೊದಲ ಆರೋಪಿ ಬಿ.ಎಸ್. ಯಡಿಯೂರಪ್ಪ, ಎರಡನೇ ಆರೋಪಿ ವೈ.ಎಂ. ಅರುಣ್, ಮೂರನೇ ಆರೋಪಿ ಎಂ. ರುದ್ರೇಶ್ ಹಾಗೂ ನಾಲ್ಕನೇ ಆರೋಪಿ ಜಿ. ಮರಿಸ್ವಾಮಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಆರೋಪಿಗಳ ವಿರುದ್ಧ ದೋಷರೋಪ ಹೊರಿಸಿರುವ ನ್ಯಾಯಾಧೀಶ ಎನ್.ಎಂ. ರಮೇಶ್, ವಿಚಾರಣೆಯನ್ನು ಮುಂದೂಡಿದ್ದಾರೆ. ಮುಂದಿನ ವಿಚಾರಣೆ ಸಂದರ್ಭದಲ್ಲಿ ಆರೋಪಿಗಳ ಪರ ವಕೀಲರು ಹಾಜರಾಗುವ ಸಾಧ್ಯತೆಯಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ವಿಡಿಯೋ ಫೋಟೋ ಅಳಿಸಲು ರೂ. 2 ಲಕ್ಷ ನೀಡಿದ್ದ ಆರೋಪಿಗಳು: ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳನ್ನು ಬಾಲಕಿ ತಾಯಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದರು. ಅದನ್ನು ಗಮನಿಸಿದ್ದ ಬಿಎಸ್ ಯಡಿಯೂರಪ್ಪ, ಇತರೆ ಆರೋಪಿಗಳ ಸಹಾಯದಿಂದ ಬಾಲಕಿ ಹಾಗೂ ತಾಯಿಯನ್ನು ತಮ್ಮ ಮನೆಗೆ ಕರೆಯಿಸಿಕೊಂಡು, ಸೋಶಿಯಲ್ ಮೀಡಿಯಾಗಳಿದ್ದ ವಿಡಿಯೋ ಮತ್ತು ಫೋಟೋಗಳನ್ನು ಡಿಲೀಟ್ ಮಾಡಿಸಿದ್ದರು. ನಂತರ ಮೊಬೈಲ್ ನಲ್ಲಿರುವ ವಿಡಿಯೋ ಹಾಗೂ ಫೋಟೋಗಳನ್ನು ಕೂಡಾ ಡಿಲೀಟ್ ಮಾಡಿದ್ದರು. ಇದೇ ಸಂದರ್ಭದಲ್ಲಿ ಆರೋಪಿಗಳು ಬಾಲಕಿಯ ತಾಯಿಗೆ ರೂ. 2 ಲಕ್ಷ ನಗದು ನೀಡಿದ್ದರು ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಹಣ ಕೊಡಿಸಿದ್ದ ಮೂವರು ಆರೋಪಿಗಳಾದ ಅರುಣ್ ರುದ್ರೇಶ್, ಮರಿಸ್ವಾಮಿ ಕೃತ್ಯಕ್ಕೆ ಸಂಬಂಧಪಟ್ಟ ವಿಡಿಯೋವನ್ನು ನೋಡಿದ್ದರು. ಯಡಿಯೂರಪ್ಪ ಹೇಳಿದ್ದರೆಂದು ದೂರುದಾರ ಮಹಿಳೆಯನ್ನು ಸಂಪರ್ಕಿಸಿದ್ದರು. ನಂತರ ಅವರನ್ನು ಯಡಿಯೂರಪ್ಪ ಅವರ ಮನೆಗೆ ಕರೆಸಿಕೊಂಡು ಮಾತುಕತೆ ಆಗಿತ್ತು. ನಂತರ ದೂರುದಾರ ಮಹಿಳೆಗೆ ರೂ. 2 ಲಕ್ಷ ಕೊಡಿಸಿ ಕಳುಹಿಸಿದ್ದರು ಎಂಬ ಮಾಹಿತಿ ಆರೋಪ ಪಟ್ಟಿಯಲ್ಲಿದೆ.

ಮಾಜಿ ಸಿಎಂ ಯಡಿಯೂರಪ್ಪ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಸಂತ್ರಸ್ತ ಬಾಲಕಿ ತಾಯಿ ಸದಾಶಿವನಗರ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು ಯಡಿಯೂರಪ್ಪ ಅವರ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ(ಪೋಕ್ಸೋ) ಅಡಿ ಪ್ರಕರಣ ದಾಖಲಿಸಿದ್ದರು. ನಂತರ ಯಡಿಯೂರಪ್ಪ ವಿರುದ್ಧ ದೂರು ನೀಡಿದ್ದ ಬಾಲಕಿ ಯಾತಿ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದು, ಈ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು.

ಸೆಕ್ಷನ್ 354 ಎ( ಲೈಂಗಿಕ ಕಿರುಕುಳ) 204 ( ಸಾಕ್ಷ್ಯನಾಶ) ಹಾಗೂ 214 (ಪ್ರಕರಣ ಮುಚ್ಚಿ ಹಾಕಲು ಆಮಿಷ) ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ಪ್ರತಿಯೊಂದು ಪುರಾವೆಯನ್ನು ಆರೋಪ ಪಟ್ಟಿ ಜೊತೆಗೆ ಲಗತ್ತಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ