ಸಿ.ಟಿ ರವಿ
ಸಿ.ಟಿ ರವಿ 
ರಾಜ್ಯ

ಸರಣಿ ಸ್ಫೋಟದ ಪ್ರಯೋಗಾರ್ಥ ರಾಮೇಶ್ವರಂ ಕೆಫೆ ಬ್ಲಾಸ್ಟ್: ಸಿ.ಟಿ ರವಿ

Shilpa D

ಬೆಂಗಳೂರು: ವೈಟ್‌ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡ ಸಿ.ಟಿ. ರವಿ ಕೆಂಡಕಾರಿದ್ದಾರೆ.

ಮತಾಂಧತೆಯ ಅತಿರೇಕದ ಪರಿಣಾಮವಾಗಿ ಪಾಕಿಸ್ತಾನದ ಪ್ರೀತಿಯನ್ನು ಬೆಳಗಾವಿ, ವಿಧಾನಸೌಧದಲ್ಲಿ ವ್ಯಕ್ತಪಡಿಸಲಾಗಿದೆ. ಇದು ಸರಣಿ ಸ್ಫೋಟದ ಪ್ರಯೋಗಾರ್ಥ ತಯಾರಿ ಎಂದು ಅನುಮಾನ ಮೂಡುವಂತಿದೆ ಎಂದು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಟಿ. ರವಿ, ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಆಗಿತ್ತು. ಈಗ ಬೆಂಗಳೂರಿನಲ್ಲಿ ಐಇಡಿ ಬಾಂಬ್ ಸ್ಫೋಟ ಆಗಿದೆ. ಕಳೆದ 11 ವರ್ಷಗಳಲ್ಲಿ ಬೆಂಗಳೂರಿನಲ್ಲಿ ಸಣ್ಣ- ದೊಡ್ಡದು ಸೇರಿ ಆರು ಸ್ಫೋಟಗಳಾಗಿವೆ. ಇದು ಸರಣಿ ಸ್ಫೋಟದ ಪ್ರಯೋಗಾರ್ಥ ತಯಾರಿಯೇ ಎಂಬ ಅನುಮಾನ ಮೂಡುವಂತಿದೆ ಎಂದು ಹೇಳಿದರು.

ರಾಜ್ಯ ಸರ್ಕಾರವು ಬಾಂಬ್ ಸ್ಫೋಟದ ಕುರಿತ ಸಮಗ್ರ ತನಿಖೆಯನ್ನು ಎನ್.ಐ.ಎ.ಗೆ ಒಪ್ಪಿಸಬೇಕು.‌ ಬ್ರ್ಯಾಂಡ್ ಬೆಂಗಳೂರಿಗೆ ಬಾಂಬ್ ಭೀತಿ ಎದುರಾಗಿದೆ. ಶುಕ್ರವಾರ (ಮಾ. 1) ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟವು ಸರಣಿ ಸ್ಫೋಟದ ಪರೀಕ್ಷಾರ್ಥ ಸ್ಫೋಟ ಅಥವಾ ರಿಹರ್ಸಲ್ ಇರಬಹುದು. ಈ ಮೂಲಕ ಮುನ್ಸೂಚನೆ ಕೊಟ್ಟಿರಬಹುದು ಎಂದು ಶಂಕೆ ವ್ಯಕ್ತಪಡಿಸಿದರು.

ಕರ್ನಾಟಕವನ್ನು ಭಯೋತ್ಪಾದಕರು ಸ್ಲೀಪರ್ ಸೆಲ್ ಆಗಿ ಮಾಡಿಕೊಂಡದ್ದು ಹೊಸತಲ್ಲ. ತರಬೇತಿ ಕೇಂದ್ರವಾಗಿಯೂ ಕರ್ನಾಟಕವನ್ನು ಬಳಸಿಕೊಂಡಿದ್ದಾರೆ. ಕೊಪ್ಪದಲ್ಲಿ ಹಿಂದೆ ಬಂದೂಕು, ಬಾಂಬ್ ತಯಾರಿಸುವ ತರಬೇತಿಯನ್ನು ಕೊಡಲಾಗುತ್ತಿತ್ತು.

ತೀರ್ಥಹಳ್ಳಿಯಲ್ಲಿ ಕುಕ್ಕರ್ ಬಾಂಬ್ ತಯಾರಿಸಲಾಗುತ್ತಿತ್ತು. ಕೊಡಗಿನಲ್ಲೂ ಭಯೋತ್ಪಾದಕರಿಗೆ ತರಬೇತಿ ಕೊಡಲಾಗುತ್ತಿತ್ತು. ಈ ಎಲ್ಲ ಮಾಹಿತಿ ಸರ್ಕಾರದ ಬಳಿ ಇದೆ ಎಂದು ‌ಸಿ.ಟಿ. ರವಿ ವಿವರಿಸಿದರು.

SCROLL FOR NEXT