ಸಾರಕ್ಕಿ ಕೆರೆ (ಸಂಗ್ರಹ ಚಿತ್ರ)
ಸಾರಕ್ಕಿ ಕೆರೆ (ಸಂಗ್ರಹ ಚಿತ್ರ) 
ರಾಜ್ಯ

ಸಾರಕ್ಕಿ ಕೆರೆ ಪುನರುಜ್ಜೀವನ: ತಪ್ಪಿದ ನೀರಿನ ಬವಣೆ; ಜೆ ಪಿ ನಗರ ನಿವಾಸಿಗಳ ಮೊಗದಲ್ಲಿ ಮಂದಹಾಸ!

Shilpa D

ಬೆಂಗಳೂರು: ಬೇಸಿಗೆಯ ಬಿಸಿಲಿನ ತಾಪ ಏರುತ್ತಿದ್ದಂತೆ ಟ್ಯಾಂಕರ್ ನೀರಿನ ಬೆಲೆ ಏರಿಕೆಯಿಂದ ನಗರದ ಬಹುತೇಕ ಭಾಗಗಳಲ್ಲಿ ಜನರು ನೀರಿಗಾಗಿ ಪರಿತಪಿಸುತ್ತಿದ್ದಾರೆ. ಬೆಂಗಳೂರು ನಗರ ನೀರಿನ ಸಮಸ್ಯೆಯಿಂದ ತತ್ತರಿಸುತ್ತಿದ್ದರೆ, ಜೆ.ಪಿ.ನಗರ ಪ್ರದೇಶ ವ್ಯಾಪ್ತಿಯ ಸುಮಾರು ಎರಡು ಲಕ್ಷ ನಿವಾಸಿಗಳು ಸಂತೋಷ ವ್ಯಕ್ತ ಪಡಿಸುತ್ತಿದ್ದಾರೆ.

ಸಾರಕ್ಕಿ ಕೆರೆಯ ಪುನರುಜ್ಜೀವನ ಮತ್ತು ಜೀರ್ಣೋದ್ಧಾರದಿಂದ ಈ ಪ್ರದೇಶದ ಸುತ್ತಮುತ್ತ ಉತ್ತಮ ಗುಣಮಟ್ಟದ ಗಾಳಿ ಮಾತ್ರವಲ್ಲದೆ ನೀರಿನ ಗುಣಮಟ್ಟ ಮತ್ತು ಅಂತರ್ಜಲ ಮಟ್ಟ ಕೂಡ ಸುಧಾರಿಸಿದೆ. ಎರಡು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಅಂತರ್ಜಲ ಮಟ್ಟ ಸುಧಾರಿಸಿ ಸಾರಕ್ಕಿ ಕೆರೆಯು ಸ್ಪಷ್ಟ ನೀಲಿ ನೀರಿನಿಂದ ತುಂಬಿರುವುದು ನಮಗೆ ಖುಷಿ ತಂದಿದೆ.

ಈ ಹಿಂದೆ 1,000 ಅಡಿ ಆಳದವರೆಗೂ ಬೋರ್‌ವೆಲ್‌ ಕೊರೆಸಬೇಕಿತ್ತಿು, ಆದರೆ ಈಗ 400 ಅಡಿಗಳಿಗೆ ನೀರು ಸಿಗುತ್ತದೆ. ಈ ಭಾಗದ ನಿವಾಸಿಗಳ ನೀರಿನ ಬೇಡಿಕೆಯ ಸುಮಾರು ಶೇ. 40 ರಷ್ಟನ್ನು ಕಾವೇರಿ ನೀರಿನಿಂದ ಮತ್ತು ಶೇ. 60 ರಷ್ಟು ಬೋರ್ ವೆಲ್ ಗಳಿಂದ ಪೂರೈಸಲಾಗುತ್ತದೆ. ಹೀಗಾಗಿ, ಈ ಬೇಸಿಗೆಯಲ್ಲಿ ಈ ಕೆರೆಯ ಪುನರುಜ್ಜೀವನವು ಮಹತ್ವದ ಪಾತ್ರವಹಿಸಿದೆ ಎಂದು ಸಾರಕ್ಕಿ ಕೆರೆ ಏರಿಯಾ ಸುಧಾರಣಾ ಟ್ರಸ್ಟ್‌ನ ಟ್ರಸ್ಟಿ ಕೆ.ಎಸ್.ಭಟ್ ಹೇಳಿದ್ದಾರೆ.

82.19 ಎಕರೆ ವಿಸ್ತೀರ್ಣದ ಸಾರಕ್ಕಿ ಕೆರೆಯನ್ನು ಮೂರು ವರ್ಷಗಳ ಹಿಂದೆ ಬಿಬಿಎಂಪಿ ಹೂಳು ತೆಗೆದು ಕಾಯಕಲ್ಪ ಮಾಡಿ, ಕೊಳಚೆ ನೀರು ಸಂಸ್ಕರಣಾ ಘಟಕವನ್ನೂ ಸ್ಥಾಪಿಸಿತ್ತು. ಕೆರೆ ಈಗ ಶುದ್ಧ ನೀರಿನಿಂದ ತುಂಬಿದೆ. ನಿವಾಸಿಗಳು ಕೆರೆ ಪುನರುಜ್ಜೀವನ ಪ್ರಕ್ರಿಯೆಯ ಭಾಗವಾಗಿದ್ದರು ಮತ್ತು ಪ್ರತಿ ಹಂತದಲ್ಲೂ ಕಾಮಗಾರಿ ಮೇಲ್ವಿಚಾರಣೆ ಮಾಡಿದರು. ಅವರು ಬಿಬಿಎಂಪಿ ಮತ್ತು ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳೊಂದಿಗೆ ಪ್ರತಿದಿನವೂ ಕೆಲಸ ಮಾಡಿದರು.

ಅಂತರ್ಜಲದ ಗುಣಮಟ್ಟ ಮತ್ತು ಕೆರೆಯ ನೀರಿನ ಗುಣಮಟ್ಟವನ್ನು ಸುಧಾರಿಸಲು ಐಐಎಸ್ ಸಿ ತಜ್ಞರು ಮತ್ತು ಕೇಂದ್ರೀಯ ಅಂತರ್ಜಲ ಮಂಡಳಿಯ ನಿವೃತ್ತ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ. ಕೆರೆಯ ಪುನರುಜ್ಜೀವನ, ಸಂಪೂರ್ಣ ಭರ್ತಿ ಮತ್ತು ಅಂತರ್ಜಲ ಮಟ್ಟ ಏರಿಕೆಗೆ ಸುಮಾರು ಎರಡು ವರ್ಷಗಳ ಸಮಯ ಬೇಕಾಯಿತು ಎಂದಿದ್ದಾರೆ.

"ಬೆಂಗಳೂರಿನಂತಹ ನಗರದಲ್ಲಿ ಜಲಮೂಲಗಳ ರಕ್ಷಣೆ ಮತ್ತು ನಿರ್ವಹಣೆ ಬಹಳ ಮುಖ್ಯ, ಮತ್ತು ಸಾರಕ್ಕಿ ಕೆರೆಯು ಅಂತಹ ಒಂದು ಉದಾಹರಣೆಯಾಗಿದೆ. ಕೆರೆಗಳ ಹೂಳು ತೆಗೆದು ಸಂಸ್ಕರಿಸಿದ ನೀರಿನಿಂದ ತುಂಬಿಸಿದರೆ ಮಾತ್ರ ಕೆರೆಗಳ ಉದ್ದೇಶ ಈಡೇರುತ್ತದೆ. ಬೆಂಗಳೂರಿನ ನೀರಿನ ಬಿಕ್ಕಟ್ಟನ್ನು ಪರಿಹರಿಸಲು, ಮಳೆ ನೀರು ಕೊಯ್ಲು ಜೊತೆಗೆ ಕೆರೆಗಳ ಹೂಳು ತೆಗೆಯುವುದು ಮತ್ತು ನಿರ್ವಹಣೆ ಮಾಡುವುದು ಮುಖ್ಯವಾಗಿದೆ ಎಂದು ಐಐಎಸ್‌ಸಿಯ ಪರಿಸರ ವಿಜ್ಞಾನಗಳ ಕೇಂದ್ರದ ಪ್ರೊ.ಟಿ.ವಿ.ರಾಮಚಂದ್ರ ಅಭಿಪ್ರಾಯ ಪಟ್ಟಿದ್ದಾರೆ.

SCROLL FOR NEXT