ಬೆಂಗಳೂರು: ಗ್ರಾಹಕರ ಸೇವೆಯ ವಿಚಾರದಲ್ಲಿ ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿದ್ದ ಇಂಡಿಗೋ ವಿಮಾನಯಾನ ಸಂಸ್ಥೆ ಇದೀಗ ಮತ್ತೆ ಸುದ್ದಿಯಲ್ಲಿದೆ,
ಬೆಂಗಳೂರಿನಿಂದ ಭೋಪಾಲ್ ಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ ಪ್ರಯಾಣಿಕರ ಸೀಟಿನ ಕುಶನ್ ಮಾಯವಾಗಿರುವ ಘಟನೆ ಬೆಳಕಿಗೆ ಬಂದಿದೆ.
ಭೋಪಾಲ್ ಗೆ ಪ್ರಯಾಣಿಸಲು ಮಹಿಳಾ ಪ್ರಯಾಣಿಕರೊಬ್ಬರು ಬೆಂಗಳೂರಿನಲ್ಲಿ ಇಂಡಿಗೋ ವಿಮಾನ ಏರಿದ್ದಾರೆ ಬಳಿಕ ತನ್ನ ಸೀಟ್ ಬಳಿ ಹೋಗಿ ನೋಡಿದರೆ ಸೀಟ್ ಕುಶನ್ ಮಾಯವಾಗಿರುವುದು ಕಂಡು ಬಂದಿದೆ.
ಇದರಿಂದ ತಬ್ಬಿಬ್ಬಾದ ಪ್ರಯಾಣಿಕ ಯವನಿಕಾ ರಾಜ್ ಶಾ ಅವರು, ತಮ್ಮ ‘X’ ಖಾತೆಯಲ್ಲಿ ಸೀಟ್ ಕುಶನ್ ಮಾಯವಾಗಿರುವ ಬಗ್ಗೆ ಬರೆದುಕೊಂಡಿದ್ದಾರೆ. ನಾನು ಸುರಕ್ಷಿತವಾಗಿ ಲ್ಯಾಂಡ್ ಆಗುತ್ತೇನೆ ಎಂದು ಆಶಿಸುತ್ತೇನೆಂದು ಹೇಳಿಕೊಂಡಿದ್ದಾರೆ.
ಇದು ಬೆಂಗಳೂರಿನಿಂದ ಭೋಪಾಲ್‌ಗೆ ಹೋಗುವ 6ಇ 6465 ಸಂಖ್ಯೆಯ ನಿಮ್ಮ ವಿಮಾನ ಎಂದು ಇಂಡಿಗೋವನ್ನು ಟ್ಯಾಗ್ ಮಾಡಿದ್ದಾರೆ. ಅಲ್ಲದೆ, ಬ್ಯೂಟಿಫುಲ್ ಇಂಡಿಗೋ ಎಂದು ಕರೆಯುವ ಮೂಲಕ ವಿಮಾನಯಾನ ಸಂಸ್ಥೆಯನ್ನು ಅಣಕಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇಂಡಿಗೋ, ಕುಷನ್‌ಗಳನ್ನು ಸ್ವಚ್ಛತೆಗಾಗಿ ತೆರವುಗೊಳಿಸಲಾಗಿತ್ತು. ಈ ಬಗ್ಗೆ ಅಲ್ಲಿ ಕೂರುವ ಪ್ರಯಾಣಿಕರಿಗೆ ವಿಮಾನದ ಕ್ಯಾಬಿನ್ ಸಿಬ್ಬಂದಿ ಮಾಹಿತಿ ನೀಡಿದ್ದರು ಎಂದು ಹೇಳಿದೆ.
ಮೇಡಂ, ನಮ್ಮ ಜತೆ ಮಾತನಾಡಿದ್ದಕ್ಕೆ ಧನ್ಯವಾದಗಳು. ವಿಮಾನ ಹಾರಾಟಕ್ಕೂ ಮುನ್ನ ಸ್ವಚ್ಛತೆ ಉದ್ದೇಶಕ್ಕಾಗಿ ಸೀಟ್ ಕುಶನ್‌ಗಳನ್ನು ತೆಗೆದು ಇರಿಸಲಾಗಿತ್ತು. ಈ ಸೀಟುಗಳನ್ನು ಹಂಚಿಕೆ ಮಾಡಲಾದ ಗ್ರಾಹಕರಿಗೆ ನಮ್ಮ ಕ್ಯಾಬಿನ್ ಸಿಬ್ಬಂದಿ ಇದರ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಯಾಣದ ವೇಳೆ ಹಾಗೂ ಅಗತ್ಯಬಿದ್ದಾಗ ಸ್ವಚ್ಛಗೊಳಿಸುವುದು ಸಾಮಾನ್ಯ ಚಟುವಟಿಕೆಯಾಗಿದೆ" ಎಂದು ವಿವರಣೆ ನೀಡಿದೆ.
ಮತ್ತೊಂದು ಪೋಸ್ಟ್ ನಲ್ಲಿ ಅತ್ಯಧಿಕ ಗುಣಮಟ್ಟದ ಸ್ವಚ್ಛತೆ ಹಾಗೂ ನೈರ್ಮಲ್ಯವನ್ನು ನಮ್ಮ ಗ್ರಾಹಕರಿಗೆ ಒದಗಿಸಲು ನಾವು ಬದ್ಧರಾಗಿದ್ದೇವೆಂದು ಹೇಳಿದೆ.
ಯವನಿಕಾ ರಾಜ್ ಶಾ ಅವರ ಪೋಸ್ಟ್ ಸಾಮಾಜಿಕ ಜಾಲತಾಣ ಬಳಕೆದಾರರ ಗಮನ ಸೆಳೆದಿದೆ. ಹತ್ತು ಲಕ್ಷಕ್ಕೂ ಅಧಿಕ ಮಂದಿ ಅದನ್ನು ವೀಕ್ಷಿಸಿದ್ದು, ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ತಿರು ಎಂಬ ವ್ಯಕ್ತಿ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿ, ಈಗ ಚುನಾವಣೆ ಸಮಯ. ಪ್ರತೀ ಸೀಟ್ ಕೂಡ ದುಬಾರಿಯಾಗಿದೆ ಎಂದು ಹಾಸ್ಯ ಮಾಡಿದ್ದಾರೆ.