ಕೇಂದ್ರ ಸಚಿವ ಅನುರಾಗ್ ಠಾಕೂರ್
ಕೇಂದ್ರ ಸಚಿವ ಅನುರಾಗ್ ಠಾಕೂರ್ 
ರಾಜ್ಯ

ಜನರ ತೆರಿಗೆ ಹಣವನ್ನು ಬಡವರ ಕಲ್ಯಾಣಕ್ಕೆ ಬಳಸಲಾಗಿದೆ: ಕೇಂದ್ರ ಸಚಿವ ಅನುರಾಗ್ ಠಾಕೂರ್

Manjula VN

ಬೆಂಗಳೂರು: ಕೇಂದ್ರ ಸರ್ಕಾರ ಜನರ ತೆರಿಗೆ ಹಣವನ್ನು ಬಡವರ ಕಲ್ಯಾಣಕ್ಕೆ ಬಳಸಿದೆ ಎಂದು ಕೇಂದ್ರ ಕ್ರೀಡಾ, ಯುವ ವ್ಯವಹಾರ ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ಶುಕ್ರವಾರ ಹೇಳಿದರು.

ಶುಕ್ರವಾರ ನಗರದ ಚರ್ಚ್ ಸ್ಟ್ರೀಟ್‍ನ ಬಿ ಹೈವ್ ಪ್ರೀಮಿಯಂನಲ್ಲಿ ನಡೆದ ‘ಬೆಂಗಳೂರಿನ ವಿಕಸಿತ ಭಾರತ ರಾಯಭಾರಿಗಳ ಸಮಾವೇಶ’ದಲ್ಲಿ ಮಾತನಾಡಿದ ಅವರು, ಜನರು ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತಿದ್ದು, ತೆರಿಗೆ ಹಣವನ್ನು ಉತ್ತಮ ಬಳಕೆಗಾಗಿ ಬಳಸುತ್ತೇವೆ. ಪ್ರತಿಯೊಂದು ಪೈಸೆಯನ್ನೂ ಬಡವರ ಕಲ್ಯಾಣಕ್ಕಾಗಿ ಮತ್ತು ರಾಷ್ಟ್ರದ ಅಭಿವೃದ್ಧಿಗಾಗಿ ಬಳಕೆ ಮಾಡಲಾಗುತ್ತಿದೆ. ಇದು ಭವಿಷ್ಯದಲ್ಲಿಯೂ ಮುಂದುವರಿಯುತ್ತದೆ ಎಂದು ಹೇಳಿದರು.

ಕಳೆದ 10 ವರ್ಷಗಳ ಪ್ರಧಾನಿ ಮೋದಿಯವರ ಅಧಿಕಾರಾವಧಿಯ ಬಗ್ಗೆ ಮಾತನಾಡಿ, ಮೋದಿ ಅವರು ಭ್ರಷ್ಟಾಚಾರ ಮುಕ್ತ ಮತ್ತು ಅಭಿವೃದ್ಧಿ ಪರ ಆಡಳಿತ ನೀಡಿದ್ದಾರೆ. ಭವಿಷ್ಯದಲ್ಲಿಯೂ ಭ್ರಷ್ಟಾಚಾರ ರಹಿತ ಆಡಳಿತ ದೊರೆಯಲಿದೆ. ನೇರ ಫಲಾನುಭವಿ ವರ್ಗಾವಣೆ ಮೂಲಕ ಹಣ ಕಳುಹಿಸುವುದರಿಂದ ಮಧ್ಯವರ್ತಿಗಳಿಲ್ಲದೆ ಜನರು ಹಣ ಪಡೆಯುತ್ತಿದ್ದಾರೆ. ಭಾರತವು ಜಗತ್ತಿನಾದ್ಯಂತ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ಕ್ರೀಡೆಯಿಂದ ಬಾಹ್ಯಾಕಾಶದವರೆಗೆ ಉತ್ತಮ ಸಾಧನೆ ಮಾಡಿದ್ದೇವೆ ಎಂದು ತಿಳಿಸಿದರು.

2004-14ರ ನಡುವೆ ಗರಿಷ್ಠ ಹಣದುಬ್ಬರ ಇತ್ತು. ಅದು ಶೇ 10ಕ್ಕಿಂತ ಹೆಚ್ಚಾಗಿತ್ತು. ಗರಿಷ್ಠ ವಿದೇಶಿ ಸಾಲವೂ ನಮ್ಮ ದೇಶದ್ದಾಗಿತ್ತು. ಹಗರಣಗಳು, ಅಸಮರ್ಪಕ ನೀತಿ ಮೊದಲಾದವು ಇವುಗಳಿಗೆ ಕಾರಣವಾಗಿದ್ದವು. ಆದರೆ, ತ್ವರಿತವಾಗಿ ನಿರ್ಧಾರ ತೆಗೆದುಕೊಳ್ಳುವ ಶೂನ್ಯ ಹಗರಣಗಳ ಆಡಳಿತ ನಮ್ಮದಾಗಿದ್ದು, ಅದು ಅಭಿವೃದ್ಧಿಗೆ ಪೂರಕ ಎಂದರು.

ಎಲ್‍ಪಿಜಿ ಸಿಲಿಂಡರ್ ಸಂಪರ್ಕ ಇಲ್ಲದ 10 ಕೋಟಿಗೂ ಹೆಚ್ಚು ಜನರಿಗೆ ಸಂಪರ್ಕ ಕೊಡಲಾಗಿದೆ. 12 ಕೋಟಿಗೂ ಹೆಚ್ಚು ಶೌಚಾಲಯ ನಿರ್ಮಿಸಿ ಕೊಡಲಾಗಿದೆ. ಜಲಜೀವನ್ ಮಿಷನ್‍ನಡಿ 14 ಕೋಟಿ ನಲ್ಲಿ ನೀರಿನ ಸಂಪರ್ಕವನ್ನು ಮನೆಗಳಿಗೆ ಕೊಡಲಾಗಿದೆ. ಪ್ರತಿ ಸೆಕೆಂಡಿಗೆ ಒಂದು ಹೊಸ ನಲ್ಲಿ ನೀರಿನ ಸಂಪರ್ಕ ನೀಡಿದ ಸಾಧನೆ ನಮ್ಮದು ಎಂದು ವಿವರಿಸಿದರು

SCROLL FOR NEXT