ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: 21 ವರ್ಷದ ಮಗನನ್ನು ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ್ದ ತಂದೆಯ ಬಂಧನ

Ramyashree GN

ಬೆಂಗಳೂರು: ಪದೇ ಪದೆ ಹಣ ಕೇಳುತ್ತಿದ್ದ ಎನ್ನುವ ಕಾರಣಕ್ಕೆ ತನ್ನ 21 ವರ್ಷದ ಮಗನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬಿಂಬಿಸಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಬಸವೇಶ್ವರನಗರ ಪೊಲೀಸ್‌ ವ್ಯಾಪ್ತಿಯಲ್ಲಿನ ಯೋಗೇಶ್‌ ಎಂಬುವವರು ಮನೆಯಲ್ಲಿ ಸೀಲಿಂಗ್‌ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶುಕ್ರವಾರ ಬಂದ ದೂರಿನ ಅನ್ವಯ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಕ್ಕಪಕ್ಕದ ಮನೆಯವರ ದೂರಿನ ಮೇರೆಗೆ ಮೃತದೇಹವನ್ನು ಖಾಸಗಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಶನಿವಾರ, ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು, ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂಬುದು ಬಹಿರಂಗಗೊಂಡಿದೆ.

ಈ ಸಂಬಂಧ ಬಸವೇಶ್ವರನಗರದಲ್ಲಿ ಬೀದಿಬದಿ ವ್ಯಾಪಾರಿಯಾಗಿರುವ ತಂದೆ ಪ್ರಕಾಶ್ ಮತ್ತು ಅವರ ಪತ್ನಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ತನ್ನ ಪತ್ನಿ ತರಕಾರಿ ಖರೀದಿಸಲೆಂದು ಮನೆಯಿಂದ ಹೊರಗೆ ಹೋಗಿದ್ದಾಗ ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಪತ್ನಿಯ ವೇಲನ್ನು ಬಳಸಿ ಯೋಗೀಶ್‌ನ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಪ್ರಕಾಶ್‌ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ನಂತರ ಪ್ರಕಾಶ್, ಯೋಗೀಶ್ ಮೃತದೇಹವನ್ನು ಅದೇ ವೇಲಿನಿಂದ ಫ್ಯಾನ್‌ಗೆ ನೇಣು ಬಿಗಿದು, ಆತ್ಮಹತ್ಯೆ ಎಂದು ಬಿಂಬಿಸಿದ್ದಾರೆ.

ತನಗೆ ಮತ್ತು ತನ್ನ ಸ್ನೇಹಿತರಿಗೆ ಮದ್ಯ ಖರೀದಿಸಲು ಪದೇ ಪದೆ ಹಣಕ್ಕಾಗಿ ಬೇಡಿಕೆಯಿಟ್ಟಿದ್ದರಿಂದ ಯೋಗೀಶ್‌ನನ್ನು ಕೊಲೆ ಮಾಡಿರುವುದಾಗಿ ಪ್ರಕಾಶ್ ಪೊಲೀಸರಿಗೆ ತಿಳಿಸಿದ್ದಾರೆ. ಯೋಗೀಶ್‌ನ ಮದ್ಯದ ಚಟದಿಂದಾಗಿ ಇಬ್ಬರ ನಡುವೆ ಆಗಾಗ್ಗೆ ಜಗಳಗಳು ಉಂಟಾಗಿದ್ದವು. ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಬಿಎ ವಿದ್ಯಾರ್ಥಿಯಾಗಿದ್ದ ಯೋಗೇಶ್, ಹಣವನ್ನು ಕದಿಯುತ್ತಿದ್ದನು ಎನ್ನಲಾಗಿದೆ.

ಸದ್ಯ ಬಸವೇಶ್ವರನಗರ ಪೊಲೀಸರು ಪ್ರಕಾಶ್ ಅವರನ್ನು ಬಂಧಿಸಿದ್ದಾರೆ.

SCROLL FOR NEXT