ರಾಜ್ಯ

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ: ಬಳ್ಳಾರಿ ಮೂಲದ ಶಬ್ಬೀರ್ NIA ವಶಕ್ಕೆ, ತೀವ್ರ ವಿಚಾರಣೆ

Sumana Upadhyaya

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಳ್ಳಾರಿ ಜಿಲ್ಲೆಯ ಶಬ್ಬೀರ್ ಎಂಬಾತನನ್ನು ಬುಧವಾರ ನಸುಕಿನ ಜಾವ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದೆ.

ಇಂದು ವಶಕ್ಕೆ ಪಡೆದಿರುವ ಶಬ್ಬೀರ್ ಪ್ರಕರಣದ ಪ್ರಮುಖ ಶಂಕಿತನೊಂದಿಗೆ ಸಾಮ್ಯತೆ ಹೊಂದಿದ್ದಾನೆ ಎಂದು ಮೂಲಗಳು ಹೇಳುತ್ತಿವೆ. ಮಾರ್ಚ್ ಒಂದರಂದು ಸ್ಫೋಟ ಸಂಭವಿಸಿದಾಗ ಆತ ಎಲ್ಲಿದ್ದನು ಎಂದು ತಿಳಿಯಲು ಎನ್ ಐಎ ಅಧಿಕಾರಿಗಳು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ಬೆಂಗಳೂರಿನ ವೈಟ್‌ಫೀಲ್ಡ್ ಬಳಿಯ ಬ್ರೂಕ್‌ಫೀಲ್ಡ್ ಪ್ರದೇಶದ ಜನಪ್ರಿಯ ಉಪಾಹಾರ ಗೃಹ ರಾಮೇಶ್ವರಂ ಕೆಫೆಯೊಳಗೆ ಕ್ಯಾಪ್ ಮತ್ತು ಮಾಸ್ಕ್ ಧರಿಸಿದ್ದ ಆರೋಪಿ ಕಡಿಮೆ ತೀವ್ರತೆಯ ಬಾಂಬ್ ನ್ನು ಬ್ಯಾಗ್ ನಲ್ಲಿ ಇರಿಸಿ ಹೋಗಿದ್ದು ಆತ ಹೋದ ಸ್ವಲ್ಪ ಹೊತ್ತಿನಲ್ಲಿಯೇ ಸ್ಫೋಟಿಸಿ ಒಂಬತ್ತು ಮಂದಿ ಗಾಯಗೊಂಡಿದ್ದರು.

ಬಾಂಬರ್‌ನ ಬಂಧನಕ್ಕೆ ತೀವ್ರ ಹುಡುಕಾಟ ನಡೆಸುತ್ತಿರುವ ಎನ್‌ಐಎ ಅಧಿಕಾರಿಗಳು ಶಂಕಿತ ಉಗ್ರನ ಸುಳಿವು ನೀಡಿದವರಿಗೆ 10 ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದ್ದಾರೆ. ಶಂಕಿತನ ಸಿಸಿಟಿವಿ ಚಿತ್ರಗಳು ಮತ್ತು ವೀಡಿಯೊಗಳನ್ನು ಸಹ ಬಿಡುಗಡೆ ಮಾಡಲಾಗಿದೆ.

ಪ್ರಕರಣದ ತನಿಖೆ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ , ಸ್ಫೋಟದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಶಂಕಿತನನ್ನು ಒಂದು ಹಂತದಲ್ಲಿ ಗುರುತಿಸಿದ್ದು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ.

ತನಿಖಾಧಿಕಾರಿಗಳು ಶಂಕಿತನ ಗುರುತನ್ನು ಪರಿಶೀಲಿಸುತ್ತಿದ್ದಾರೆ. ಶಂಕಿತ ವ್ಯಕ್ತಿಯನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ. ಶಂಕಿತನೇ ಪ್ರಮುಖ ಆರೋಪಿ ಎಂದು ದೃಢಪಡಿಸಬೇಕಾಗಿದ್ದು, ಅವನನ್ನು ಬಂಧಿಸಬೇಕಾಗಿದೆ." ಶಂಕಿತನ ಜಾಡು ಹಿಡಿದು ತುಮಕೂರು, ಬಳ್ಳಾರಿ, ಕಲಬುರಗಿ ಜಿಲ್ಲೆಗಳಿಗೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಈಗಾಗಲೇ ಭೇಟಿ ನೀಡಿದ್ದಾರೆ.

SCROLL FOR NEXT