ಸಂಗ್ರಹ ಚಿತ್ರ
ಸಂಗ್ರಹ ಚಿತ್ರ 
ರಾಜ್ಯ

ಬಳ್ಳಾರಿ: ನೀತಿ ಸಂಹಿತೆ ಜಾರಿ ಬೆನ್ನಲ್ಲೇ ದಾಖಲೆ ಇಲ್ಲದ 15 ಲಕ್ಷ ರೂ. ಮೌಲ್ಯದ ಮೆಣಸಿನಕಾಯಿ ವಶಕ್ಕೆ

Manjula VN

ಬಳ್ಳಾರಿ: ಲೋಕಸಭೆ ಸಾರ್ವತ್ರಿಕ ಚುನಾವಣೆ 2024ರ ಅಂಗವಾಗಿ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿದ್ದು, ಕಳೆದ ಎರಡು ದಿನಗಳಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದ 15 ಲಕ್ಷ ರೂ.ಮೌಲ್ಯದ ಮೆಣಸಿನಕಾಯಿಯನ್ನು ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾಡಳಿತದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಚುನಾವಣಾ ನಿಯಮಗಳ ಪ್ರಕಾರ, ಕೃಷಿ ಉತ್ಪನ್ನಗಳು ಮತ್ತು ಇತರ ವಸ್ತುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವವರು ಸರಿಯಾದ ದಾಖಲೆಗಳನ್ನು ನೀಡುವುದು ಕಡ್ಡಾಯವಾಗಿದೆ.

ಕಳೆದ ತಿಂಗಳು ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾಧಿಕಾರಿಗಳು ರೈತರೊಂದಿಗೆ ವಿಶೇಷವಾಗಿ ಮೆಣಸಿನಕಾಯಿ ಬೆಳೆಗಾರರ ​​ಜೊತೆ ಸಭೆ ನಡೆಸಿ, ತಮ್ಮ ಉತ್ಪನ್ನಗಳನ್ನು ಸಾಗಿಸುವಾಗ ಇ-ವೇ ಬಿಲ್‌ಗಳನ್ನು ತರುವಂತೆ ಸೂಚನೆ ನೀಡಿದ್ದರು.

ಮತದಾರರಿಗೆ ಆಮಿಷವೊಡ್ಡಲು ನಗದು, ಮದ್ಯ ಹಾಗೂ ಇತರೆ ಆಮಿಷಗಳ ಸಾಗಣೆಗೆ ಕಡಿವಾಣ ಹಾಕಲು ಹಲವು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ಎಲ್ಲಾ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಇದರಂತೆ ರೈತರು ಮತ್ತು ವ್ಯಾಪಾರಿಗಳಿಗೆ ತೊಂದರೆಯಾಗದಂತೆ ಎಲ್ಲ ದಾಖಲೆಗಳನ್ನು ಕೊಂಡೊಯ್ಯುವಂತೆ ಜಿಲ್ಲಾಡಳಿತದ ಅಧಿಕಾರಿಗಳು ಮತ್ತೊಮ್ಮೆ ಸೂಚನೆ ನೀಡಿದ್ದಾರೆ.

ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮಾತನಾಡಿ, ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ 15 ಲಕ್ಷ ಮೌಲ್ಯದ 11 ಕ್ವಿಂಟಾಲ್ ಮೆಣಸಿನಕಾಯಿಯನ್ನು ವಶಕ್ಕೆ ಪಡೆಯಲಾಗಿದೆ. ರೈತರು ಮತ್ತು ಸಾಗಣೆದಾರರು ದಾಖಲೆಗಳ ಒದಗಿಸಲು ವಿಫಲರಾದ ಹಿನ್ನೆಲೆಯಲ್ಲಿ ಮೆಣಸಿನಕಾಯಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಬಳ್ಳಾರಿಯಲ್ಲಿ ಉತ್ತಮ ಗುಣಮಟ್ಟದ ಮೆಣಸಿನಕಾಯಿ ಬೆಳೆಯಲಾಗುತ್ತಿದ್ದು, ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರೈತರು ಮತ್ತು ವ್ಯಾಪಾರಿಗಳಿಗೆ ಸೂಚಿಸಿದ್ದೇವೆ. ಶೀಘ್ರದಲ್ಲೇ ಎಲ್ಲಾ ವಿವರಗಳನ್ನು ನೀಡಲಾಗುವುದು ಎಂದು ತಿಳಿಸಿದರು.

SCROLL FOR NEXT