ಬೆಂಗಳೂರು: ಪಶ್ಚಿಮ ಬಂಗಾಳದಲ್ಲಿ ಶಾಖೆ ಹೊಂದಿರುವ ಕೀನ್ಯಾ ಮೂಲದ ಮೂಲಸೌಕರ್ಯ ಸಂಸ್ಥೆ ಆಸ್ಟ್ರಮ್ ಇಂಟರ್‌ನ್ಯಾಷನಲ್ ಲಿಮಿಟೆಡ್, ನಗರದ ಜನದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ 27,000 ಕೋಟಿ ರೂ.ಗಳ ಪೆರಿಫೆರಲ್ ರಿಂಗ್ ರೋಡ್ (ಪಿಆರ್‌ಆರ್) ಯೋಜನೆಗೆ ಏಕೈಕ ಬಿಡ್ಡರ್ ಆಗಿ ಹೊರಹೊಮ್ಮಿದೆ. 2007ರಲ್ಲಿ ಮೊದಲು ಪ್ರಸ್ತಾಪಿಸಲಾದ 74 ಕಿಮೀ ಯೋಜನೆಗೆ ಈಗ ಮೂರನೇ ಬಾರಿ ಟೆಂಡರ್ ಕರೆಯಲಾಗಿದೆ.
"ಸೋಮವಾರ ಸಂಜೆ ಬಿಡ್‌ಗಳನ್ನು ಆಹ್ವಾನಿಸಿದಾಗ, ಕೇವಲ ಒಂದು ಸಂಸ್ಥೆ ಮಾತ್ರ ಅರ್ಜಿ ಸಲ್ಲಿಸಿದೆ. ಅದರ ತಾಂತ್ರಿಕ ಮೌಲ್ಯಮಾಪನ ಮಾಡಬೇಕಾಗಿದೆ ಮತ್ತು ನಂತರ ಸಂಸ್ಥೆಯ ಆರ್ಥಿಕ ಸಾಮರ್ಥ್ಯವನ್ನೂ ಮೌಲ್ಯಮಾಪನ ಮಾಡಬೇಕಾಗಿದೆ." ಸಂಸ್ಥೆಯು ಅಂತಾರಾಷ್ಟ್ರೀಯ ಬ್ಯಾಂಕ್ ನೀಡಿದ ತನ್ನ ಮೊದಲ ಚೆಕ್ ಅನ್ನು ಮಂಗಳವಾರ ಬಿಡಿಎ ಕಚೇರಿಗೆ ಸಲ್ಲಿಸಿದೆ ಎಂದು ಬಿಡಿಎ ಮೂಲವೊಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದೆ.
ಹಲವು ಕಂಪನಿಗಳು ಪಿಆರ್‌ಆರ್‌ಗಾಗಿ ಬಿಡ್ಡಿಂಗ್‌ನಲ್ಲಿ ಆಸಕ್ತಿ ತೋರಿಸಿದ್ದರೂ, ಭೂಸ್ವಾಧೀನಕ್ಕಾಗಿ ಹೂಡಿಕೆ ಮಾಡಬೇಕಾದ ದೊಡ್ಡ ಮೊತ್ತವು ಅವುಗಳನ್ನು ಪುನರ್ವಿಮರ್ಶಿಸುವಂತೆ ಮಾಡಿದೆ ಎಂದು ಅವರು ಹೇಳಿದರು. "ನಿರ್ಮಾಣ ವೆಚ್ಚ ಕೇವಲ 6,000 ಕೋಟಿ ರೂ.ಗಳಾಗಿದ್ದರೂ, ಭೂಸ್ವಾಧೀನ ವೆಚ್ಚವು 21,000 ಕೋಟಿಗೆ ತಲುಪುವ ನಿರೀಕ್ಷೆಯಿದೆ" ಎಂದು ಅಧಿಕಾರಿ ವಿವರಿಸಿದ್ದಾರೆ.
ಆದಾಗ್ಯೂ, ಸಂಸ್ಥೆಯು ತಾಂತ್ರಿಕ ಮತ್ತು ಹಣಕಾಸಿನ ಸುತ್ತುಗಳ ಮೂಲಕ ಬಂದಾಗ ಬಿಡ್ ಅನ್ನು ಸ್ವೀಕರಿಸಲು ರಾಜ್ಯ ಹಣಕಾಸು ಇಲಾಖೆಯನ್ನು ಅವಲಂಬಿಸಿರುತ್ತದೆ. "ಇದು ಕೇವಲ ಏಕೈಕ ಬಿಡ್ಡರ್ ಆಗಿರುವುದರಿಂದ, ಅದನ್ನು ತಿರಸ್ಕರಿಸಲು ಮತ್ತು ಹೊಸದಾಗಿ ಟೆಂಡರ್ ಕರೆಯಲು ಸರ್ಕಾರಕ್ಕೆ ಅವಕಾಶ ಇದೆ. ಆದಾಗ್ಯೂ, ಯೋಜನೆಯನ್ನು ಕೈಗೆತ್ತಿಕೊಳ್ಳಲು ಬಿಡ್ದರ್ ಒಬ್ಬರು ಮುಂದೆ ಬಂದಿರುವುದು ಇದೇ ಮೊದಲು ಎಂಬ ಅಂಶವನ್ನು ಸರ್ಕಾರ ಪರಿಗಣಿಸಬಹುದು" ಅವರು ತಿಳಿಸಿದ್ದಾರೆ.
ಎಂಟು ಪಥಗಳ ಯೋಜನೆಗೆ ಜನವರಿ 30 ರಂದು ಟೆಂಡರ್ ಕರೆಯಲಾಗಿತ್ತು. ಬಿಡ್ ಮಾಡಲು ಸ್ವಲ್ಪ ಸಮಯ ಕೇಳಿದ ಸಂಸ್ಥೆಗಳ ಕೋರಿಕೆಯ ಮೇರೆಗೆ ಬಿಡ್‌ಗಳನ್ನು ಸಲ್ಲಿಸುವ ಕೊನೆಯ ದಿನವನ್ನು ಫೆಬ್ರವರಿ 29 ರಿಂದ ಮಾರ್ಚ್ ಮಧ್ಯದವರೆಗೆ ವಿಸ್ತರಿಸಲಾಗಿತ್ತು. ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ 50 ವರ್ಷಗಳ ಗುತ್ತಿಗೆ ಅವಧಿಯೊಂದಿಗೆ ಕಾರ್ಯಗತಗೊಳಿಸಲಾಗುತ್ತಿದೆ.