ನಮ್ಮ ಮೆಟ್ರೋ
ನಮ್ಮ ಮೆಟ್ರೋ 
ರಾಜ್ಯ

IPL 2024: ಬೆಂಗಳೂರು ಪಂದ್ಯಗಳ ದಿನ Namma Metro ರೈಲು ಸೇವೆ ಅವಧಿ ವಿಸ್ತರಣೆ- BMRCL

Srinivasamurthy VN

ಬೆಂಗಳೂರು: ಇಂದಿನಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿ ಆರಂಭವಾಗುತ್ತಿದ್ದು, ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯಗಳಿಗೆ ಮೆಟ್ರೋ ರೈಲು ಸೇವೆ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ಮೆಟ್ರೋ ರೈಲು ಪ್ರಾಧಿಕಾರ ಬಿಎಂಆರ್ ಸಿಎಲ್ ಹೇಳಿದೆ.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಬಿಎಂಆರ್ ಸಿಎಲ್, ಬೆಂಗಳೂರಿನ ಬಿಡದಿ ಇಂಡಸ್ಟ್ರಿಯಲ್‌ ಏರಿಯಾದಲ್ಲಿ ದಿನಾಂಕ 24ನೇ ಮಾರ್ಚ್‌ 2024 (ಭಾನುವಾರ) ದಂದು ನಿಗದಿಯಾಗಿರುವ ಬಿಡದಿ ಹಾಫ್‌ ಮ್ಯಾರಥಾನ್‌ನಲ್ಲಿ ಸಾರ್ವಜನಿಕರು ಭಾಗವಹಿಸಲು ಅನುಕೂಲಕ್ಕಾಗಿ ತನ್ನ ಎಲ್ಲಾ ನಾಲ್ಕು ಟರ್ಮಿನಲ್‌ಗಳಿಂದ ಮತ್ತು ಇಂಟರ್‌ಚೇಂಜ್‌ ಸ್ಟೇಷನ್‌ ನಾಡಪ್ರಭು ಕೆಂಪೇಗೌಡ ಮೆಟ್ರೋ ಸ್ಟೇಷನ್‌-ಮೆಜೆಸ್ಟಿಕ್‌ ಗೆ ಬೆಳಿಗ್ಗೆ 07:00 ಗಂಟೆ ಬದಲಾಗಿ ಬೆಳಗ್ಗೆ 04:30ರಿಂದಲೇ ಮೆಟ್ರೋ ರೈಲು ಸೇವೆಗಳನ್ನು ಪ್ರಾರಂಭಿಸುತ್ತದೆ ಎಂದು ಹೇಳಿದೆ.

ಅಂತೆಯೇ ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್ ಕ್ರಿಕೆಟ್‌ ಪಂದ್ಯಗಳ ವೀಕ್ಷಣೆಗಾಗಿ, ದಿನಾಂಕ 25, 29 ಮಾರ್ಚ್‌ ಮತ್ತು 02 ಏಪ್ರಿಲ್‌ 2024 ರಂದು ಎಲ್ಲಾ ನಾಲ್ಕು ಟರ್ಮಿನಲ್‌ ಮೆಟ್ರೋ ನಿಲ್ದಾಣಗಳಿಂದ ತನ್ನ ಕೊನೆಯ ರೈಲು ಸೇವೆಗಳನ್ನು ರಾತ್ರಿ 11.30 ಕ್ಕೆ ವಿಸ್ತರಿಸಲಿದೆ. ಈ ಪಂದ್ಯದ ದಿನಗಳಲ್ಲಿ, ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಮಧ್ಯಾಹ್ನ 2.00 ಗಂಟೆಯಿಂದ ರಿಟರ್ನ್‌ ಜರ್ನಿ ಪೇಪರ್‌ ಟಿಕೆಟ್‌ಗಳು ರೂ, 50/- ಮಾರಾಟಕ್ಕೆ ಲಭ್ಯವಿರುತ್ತದೆ.

ಇದು ಕಬ್ಬನ್‌ ಪಾರ್ಕ್‌ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳಿಂದ ಯಾವುದೇ ಇತರ ಮೆಟ್ರೋ ನಿಲ್ದಾಣಕ್ಕೆ ಒಂದೇ ಪ್ರಯಾಣಕ್ಕೆ ವಿತರಣೆಯ ದಿನದಂದು ರಾತ್ರಿ 8.00 ರಿಂದ ದಿನದ ಸೇವೆಗಳು ಕೊನೆಗೊಳ್ಳುವವರಗೆ ಮಾನ್ಯವಾಗಿರುತ್ತದೆ. ಈ ನಿಲ್ದಾಣಗಳಲ್ಲಿ ಮೆಟ್ರೋ ಟೋಕನ್‌ ಲಭ್ಯವಿರುವುದಿಲ್ಲ ಎಂದು ಹೇಳಿದೆ.

ಅಂತೆಯೇ ಎಂದಿನಂತೆ, ಕ್ಯೂಆರ್ ಕೋಡ್‌ ಟಿಕೆಟ್‌ಗಳು, ಸ್ಮಾರ್ಟ್‌ ಕಾರ್ಡ್‌ಗಳು ಮತ್ತು ಎನ್ ಸಿಎಂಸಿ ಕಾರ್ಡ್‌ಗಳನ್ನು ಸಹ ಬಳಸಬಹುದು. ವಾಟ್ಸಪ್‌/ನಮ್ಮ ಮೆಟ್ರೋ ಅ್ಯಪ್‌/ಪೇ ಟಿಎಂ ಮೂಲಕ ಕ್ರಿಕೆಟ್‌ ಪಂದ್ಯದ ಆರಂಭಕ್ಕೆ ಮುಂಚಿತವಾಗಿ ಕ್ಯೂಆರ್ ಕೋಡ್ ಟಿಕೆಟ್‌ಗಳನ್ನು ಖರೀದಿಸಲು ಸಾರ್ವಜನಿಕರಿಗೆ ಸೂಚಿಸಲಾಗಿದೆ. ಕಬ್ಬನ್‌ ಪಾರ್ಕ್‌ ಮತ್ತು ಎಂಜಿ ರೋಡ್‌ ಮೆಟ್ರೋ ನಿಲ್ದಾಣಗಳಲ್ಲಿ ಟಿಕೆಟ್‌ ಖರೀದಿಸಲು ಟಿಕೆಟ್‌ ಕೌಂಟರ್‌ಗಳಲ್ಲಿ ಜನಸಂದಣಿಯನ್ನು ತಪ್ಪಿಸಲು ಪ್ರಯಾಣಿಕರು ಮೇಲಿನ ಸೌಲಭ್ಯವನ್ನು ಬಳಸಿಕೊಳ್ಳುವಂತೆ ವಿನಂತಿಸಲಾಗಿದೆ.

ಇಂದಿನಿಂದ ಐಪಿಎಲ್ ಪಂದ್ಯಾವಳಿ ಆರಂಭ

ಇನ್ನು ಐಪಿಎಲ್ ಪಂದ್ಯಾವಳಿ ಇಂದಿನಿಂದ ಆರಂಭವಾಗುತ್ತಿದ್ದು, ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿವೆ.

SCROLL FOR NEXT