ಕುಮಾರಸ್ವಾಮಿ ಲೇಔಟ್ ನಲ್ಲಿ ಗುಂಪು ಘರ್ಷಣೆ
ಕುಮಾರಸ್ವಾಮಿ ಲೇಔಟ್ ನಲ್ಲಿ ಗುಂಪು ಘರ್ಷಣೆ 
ರಾಜ್ಯ

ನಗರತ್ ಪೇಟೆ ಪ್ರಕರಣ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಮತ್ತೊಂದು ಗುಂಪು ಘರ್ಷಣೆ!

Srinivasamurthy VN

ಬೆಂಗಳೂರು: ನಗರತ್ ಪೇಟೆ ಹಲ್ಲೆ ಪ್ರಕರಣ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಮತ್ತೊಂದು ಗುಂಪು ಘರ್ಷಣೆ ಪ್ರಕರಣ ವರದಿಯಾಗಿದ್ದು, ಕ್ಷುಲ್ಲಕ ವಿಚಾರಕ್ಕೆ ಮಧ್ಯರಾತ್ರಿ ಅನ್ಯಕೋಮಿನ ಗುಂಪೊಂದು ಕುಟುಂಬವೊಂದರ ಮೇಲೆ ಹಲ್ಲೆ ಮಾಡಿದೆ ಎನ್ನಲಾಗಿದೆ.

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನ ಪ್ರಗತಿಪರ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ತಡರಾತ್ರಿ ಆಟೋ ಪಾರ್ಕಿಂಗ್ (Parking) ವಿಚಾರಕ್ಕೆ ಎರಡು ಕೋಮುಗಳ ನಡುವೆ ಗಲಾಟೆ ನಡೆದಿದೆ. ಬನಶಂಕರಿಯ (Banashankari) ಪ್ರಗತಿಪರ ಬಡಾವಣೆಯಲ್ಲಿ ಆಟೋ ಪಾರ್ಕಿಂಗ್ ವಿಚಾರಕ್ಕೆ ಅನ್ಯಕೋಮಿನ ಯುವಕರು ಮನೆಗೆ ನುಗ್ಗಿ ಮಹಿಳೆಯರು (Woman), ಪುರುಷರು, ಮಕ್ಕಳು ಸೇರಿ 8 ಮಂದಿ ಮೇಲೆ ಅನ್ಯಕೋಮಿನ ಗುಂಪು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಮಸೀದಿಯಿಂದ ಯುವಕರನ್ನು ಕರೆತಂದು ಹಲ್ಲೆ?

ಈ ಕುರಿತು ಮಾಧ್ಯಮವೊಂದು ವರದಿ ಮಾಡಿದ್ದು, ಪ್ರಗತಿಪರ ಬಡಾವಣೆಯ ಕಿರಿದಾದ ರಸ್ತೆಯಲ್ಲಿ ಶಿವಕುಮಾರ್ ಅನ್ನೋರ ಮನೆ ಮುಂದೆ ಆಟೋ ಚಾಲಕನೊಬ್ಬ ಆಟೋ ಪಾರ್ಕ್ ಮಾಡ್ತಿದ್ದರು. ಇಲ್ಲಿ ಆಟೋ ನಿಲ್ಲಿಸಬೇಡಿ ಅಂದಿದ್ದಕ್ಕೆ ಮಾತಿನ ಚಕಮಕಿ ನಡೆಸಿದ ಅನ್ಯಕೋಮಿನ ವ್ಯಕ್ತಿ ಯುವಕರನ್ನ ಕರೆತಂದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೇ ಸಮೀಪದ ಮಸೀದಿಯಿಂದಲೂ ಮತ್ತಷ್ಟು ಜನರನ್ನ ಕರೆತಂದ ಯುವಕರ ಗುಂಪು, ಶಿವಕುಮಾರ್ ಎನ್ನುವವರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಮನೆಯಲ್ಲಿದ್ದ ಮಹಿಳೆಯರು, ಮಕ್ಕಳ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಹಲ್ಲೆ ಬಳಿಕ ಆರೋಪಿಗಳು ನಾಪತ್ತೆಯಾಗಿದ್ದು, ಶಿವಕುಮಾರ್ ಕುಟುಂಬಸ್ಥರಿಗೆ ಗಾಯಗಳಾಗಿವೆ.

ಪೊಲೀಸ್ ದೂರು ದಾಖಲು

ಹಲ್ಲೆ, ಗಲಾಟೆ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸ್ತಿದ್ದಾರೆ. ಸ್ಥಳಕ್ಕೆ ಕುಮಾರಸ್ವಾಮಿ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಲ್ಲೆಯಲ್ಲಿ ಗಾಯಗೊಂಡಿರುವವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪೊಲೀಸರು ತನಿಖೆ ಮುಂದುವರೆಸಿದ್ದು, ಗಲಾಟೆ ಮಾಡಿ ಸ್ಥಳದಿಂದ ಎಸ್ಕೇಪ್ ಆಗಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬಿಜೆಪಿ ಸಂಸದ ಪ್ರತಾಪ್​ ಸಿಂಹ ಟ್ವೀಟ್,​ ಬಳಿಕ ಡಿಲೀಟ್​!

ಇನ್ನು ಘಟನೆ ಕುರಿತ ವಿಡಿಯೋವನ್ನು ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದ ಸಂಸದ ಪ್ರತಾಪ್​ ಸಿಂಹ ಅವರು, ಈ ಘಟನೆ ನಡೆದಿರುವುದು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಲ್ಲಿ. ಈ ಘಟನೆಯ ವಿಚಾರ ನಗರ ಪೊಲೀಸ್ ಆಯುಕ್ತ ದಯಾನಂದರ ಗಮನಕ್ಕೂ ತಂದಿದ್ದೇನೆ. “wakeup Hindus” ಎಂದು ಬರೆದುಕೊಂಡಿದ್ದರು. ಆದರೆ ಕೆಲ ಸಮಯದ ಬಳಿಕ ಪ್ರತಾಪ್​ ಸಿಂಹ ಅವರು ತಮ್ಮ ಪೋಸ್ಟ್​ ಅನ್ನು ಡಿಲೀಟ್ ಮಾಡಿದ್ದಾರೆ.

ಕೋಮು ಗಲಭೆ ಅಲ್ಲ

ಮತ್ತೊಂದೆಡೆ ಘಟನೆ ಸಂಬಂಧ ದಕ್ಷಿಣ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜ್ ಮಾಹಿತಿ ನೀಡಿದ್ದು, ಹಲ್ಲೆಗೊಳಗಾದವರು ಹಾಗೂ ಹಲ್ಲೆ ಮಾಡಿದ್ದಾರೆ ಎನ್ನಲಾದ ಸೈಯಿದ್ ತಾಹ ಅಕ್ಕಪಕ್ಕದ ಮನೆಯವರು. ಎರಡು ಕುಟುಂಬಗಳು ಪಾರ್ಕಿಂಗ್ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಈವರೆಗಿನ ತನಿಖೆಯಲ್ಲಿ ಯಾವುದೇ ಕೋಮು ಆಯಾಮ ಕಂಡು ಬಂದಿಲ್ಲ. ಘಟನೆ ನಡೆದ ಸ್ಥಳದ ಸ್ವಲ್ಪ ದೂರದಲ್ಲೇ ಮಸೀದಿ ಇದೆ. ಹೀಗಾಗಿ ನಮಾಜ್ ಗೆಂದು ಬಂದವರು ಸಹ ಗಲಾಟೆ ವೇಳೆ ಅಲ್ಲಿ ಸೇರಿದ್ದರು. ಆ ಬಗ್ಗೆ ಸಹ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

SCROLL FOR NEXT