ನಕ್ಸಲ್
ನಕ್ಸಲ್ 
ರಾಜ್ಯ

ರೈತರ ಮನೆಗೆ ಶಂಕಿತ ನಕ್ಸಲರ ಭೇಟಿ: ನಾಲ್ವರ ವಿರುದ್ಧ ಪೊಲೀಸ್ ಎಫ್ಐಆರ್

Srinivas Rao BV

ದಕ್ಷಿಣ ಕನ್ನಡ: ರೈತರ ಮನೆಯೊಂದಕ್ಕೆ ಶಂಕಿತ ನಕ್ಸಲರು ಭೇಟಿ ನೀಡಿದ್ದ ಅನುಮಾನದ ಮೇಲೆ ದಕ್ಷಿಣ ಕನ್ನಡ ಪೊಲೀಸರು ನಾಲ್ವರ ವಿರುದ್ಧ ಎಫ್ಐ ಆರ್ ದಾಖಲಿಸಿದ್ದಾರೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಕ್ಸಲ್ ನಿಗ್ರಹ ದಳ, ಕಾರ್ಕಳ ವಿಭಾಗೀಯ ಎಸ್ ಪಿ ಜಿತೇಂದ್ರ ದಯಾಮ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ್ದು, ರೈತ ಅಶೋಕ್ ಎಂಬುವವರ ಮನೆಗೆ ಬಂದಿದ್ದ ಶಂಕಿತ ನಕ್ಸಲರು ಅವರ ಮನೆಯಿಂದ ಅಕ್ಕಿ, ಮೆಣಸಿನಕಾಯಿ ಹಾಗೂ ಇನ್ನಿತರ ದಿನಸಿ ಪದಾರ್ಥಗಳನ್ನು ಕೊಂಡೊಯ್ದಿದ್ದಾರೆ ಎಂದು ಹೇಳಿದ್ದಾರೆ.

ಶನಿವಾರದಂದು ಸಂಜೆ 6.30 ಕ್ಕೆ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರು ನಮ್ಮ ಮನೆಗೆ ಬಂದಿದ್ದರು. ಓರ್ವ ಮಹಿಳೆ 30-35 ವರ್ಷದ ವಯಸ್ಸಿನವರಾಗಿದ್ದು, ಮತ್ತೋರ್ವ ಮಹಿಳೆಗೆ 40-45 ವರ್ಷ ವಯಸ್ಸಾಗಿತ್ತು. ಅವರು ತಮ್ಮ ಬಳಿ ಬಂದೂಕು ಹೊಂದಿದ್ದರು. ಕನ್ನಡ, ತುಳು ಭಾಷೆಗಳಲ್ಲಿ ಮಾತನಾಡುತ್ತಿದ್ದರು. ಅವರು ತಮ್ಮನ್ನು ನಕ್ಸಲರೆಂದು ಪರಿಚಯಿಸಿಕೊಂಡು, ಬಡವರಿಗೆ ನ್ಯಾಯ ಒದಗಿಸುವುದಕ್ಕಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿದರು. ಅಷ್ಟೇ ಅಲ್ಲದೇ ಆಹಾರ ನೀಡುವುದಾಗಿ ಕೇಳಿಕೊಂಡ ಅವರು ಕೆಲವು ದಿನಸಿ ಪದಾರ್ಥಗಳನ್ನೂ ನೀಡುವಂತೆ ಕೇಳಿದರು. ಭಯದಿಂದ ನಾವು ಅವರು ಕೇಳಿದ್ದನ್ನು ಕೊಟ್ಟೆವು. ಈ ಬಳಿಕ ತಮ್ಮನ್ನು ಬೆಂಬಲಿಸುವಂತೆ ಕೇಳಿದ ಅವರು ಈ ಮಾಹಿತಿಯನ್ನು ಯಾರಿಗಾದರೂ ನೀಡಿದರೆ ಕೊಲ್ಲುವುದಾಗಿ ಬಂದೂಕು ತೋರಿಸಿ ಬೆದರಿಕೆ ಹಾಕಿ ಸಂಜೆ 7:30 ವೇಳೆಗೆ ಹೊರಟುಹೋದರು ಎಂದು ಅಶೋಕ್ ಹೇಳಿದ್ದಾರೆ.

ಶಂಕಿತ ನಕ್ಸಲರ ವಿರುದ್ಧ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಮತ್ತು 1967ರ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಎಎನ್‌ಎಫ್ ಎಸ್‌ಪಿ ಮತ್ತಷ್ಟು ಸ್ಪಷ್ಟಪಡಿಸಿದ್ದು, "ರೈತ ನಕ್ಸಲ್ ಸಹಾನುಭೂತಿ ಹೊಂದಿರಲಿಲ್ಲ. ಅವರು (ಶಂಕಿತ ನಕ್ಸಲರು) ಆಕಸ್ಮಿಕವಾಗಿ ಅವರ ಮನೆಗೆ ಭೇಟಿ ನೀಡಿ ಕೆಲವು ದಿನಸಿ ವಸ್ತುಗಳನ್ನು ನೀಡುವಂತೆ ಒತ್ತಾಯಿಸಿದ್ದಾರೆ. ಮನೆಗೆ ಭೇಟಿ ನೀಡಿದ ವ್ಯಕ್ತಿಗಳನ್ನು ನಾವು ಇನ್ನೂ ಗುರುತಿಸಿಲ್ಲ. ನಮ್ಮ ಸಿಬ್ಬಂದಿಯಿಂದ ಕೂಂಬಿಂಗ್ ಕರ್ನಾಟಕ, ಕೇರಳ ಗಡಿಗಳಲ್ಲಿ ಮುಂದುವರಿದಿದೆ,’’ ಎಂದರು.

SCROLL FOR NEXT