ಜೆಡಿಎಸ್- ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
ಜೆಡಿಎಸ್- ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ 
ರಾಜ್ಯ

ತುರುವೇಕೆರೆ: ಸೋಮಣ್ಣ ಎದುರೇ ವೇದಿಕೆಯಲ್ಲಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ವಾಗ್ವಾದ, ಮಾತಿನ ಚಕಮಕಿ!

Shilpa D

ತುಮಕೂರು: ತುರುವೇಕೆರೆಯಲ್ಲಿ ಸೋಮವಾರ ನಡೆದ ಬಿಜೆಪಿ– ಜೆಡಿಎಸ್‌ ಮೈತ್ರಿ ಸಭೆ ಎರಡೂ ಪಕ್ಷಗಳ ಕಾರ್ಯಕರ್ತರು ಮತ್ತು ಮುಖಂಡರ ಮಧ್ಯದ ವಾಗ್ವಾದಕ್ಕೆ ವೇದಿಕೆಯಾಯಿತು.

ಜೆಡಿಎಸ್‌ ಶಾಸಕ ಎಂ.ಟಿ.ಕೃಷ್ಣಪ್ಪ, ಬಿಜೆಪಿಯ ಕೊಂಡಜ್ಜಿ ವಿಶ್ವನಾಥ್‌ 2019ರ ಚುನಾವಣೆಯಲ್ಲಿ ಅಂದಿನ ಕಾಂಗ್ರೆಸ್‌ ಅಭ್ಯರ್ಥಿ ಮುದ್ದಹನುಮೇಗೌಡ ಅವರಿಗೆ ಬೆಂಬಲ ನೀಡಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಲ್ಲಿ ಇದ್ದುಕೊಂಡು ನನ್ನ ವಿರುದ್ಧ ಕೆಲಸ ಮಾಡಿದರು. ಈ ಬಾರಿ ಬಿಜೆಪಿ ಅಭ್ಯರ್ಥಿಗೆ ಸಹಕಾರ ನೀಡುತ್ತಾರೆಯೇ ಅಥವಾ ಬೇರೆ ಏನಾದರೂ ಮಾಡುತ್ತಾರೆಯೇ? ಎಂದು ಪ್ರಶ್ನಿಸಿದ್ದು ಬಿಜೆಪಿ ಕಾರ್ಯಕರ್ತರನ್ನು ಕೆರಳಿಸಿತು.

ಕೃಷ್ಣಪ್ಪ ಹೇಳಿಕೆಗೆ ಸಮಜಾಯಿಷಿ ಕೊಡಲು ಮುಂದಾದ ಕೊಂಡಜ್ಜಿ ವಿಶ್ವನಾಥ್‌ ಅವರನ್ನು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ತಡೆದರು. ಈಗ ಏನೂ ಮಾತನಾಡುವುದು ಬೇಡ ಎಂದು ವಾಪಸ್‌ ಕಳುಹಿಸಿದರು. ಇದರಿಂದಾಗಿ ವೇದಿಕೆ ಮೇಲೆಯೇ ಮುಖಂಡರ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.

ಇದೇ ವೇಳೆ ವೇದಿಕೆಯ ಮುಂಭಾಗದಲ್ಲಿದ್ದ ಬಿಜೆಪಿಯ ಕಡೇಹಳ್ಳಿ ಸಿದ್ದೇಗೌಡ, ಕೃಷ್ಣಪ್ಪ ಯಾವಾಗಲೂ ಇಂತಹ ದುರಹಂಕಾರದ ಮಾತುಗಳನ್ನಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನು ಕೇಳಿಸಿಕೊಂಡು ವೇದಿಕೆಯಲ್ಲಿದ್ದ ಜೆಡಿಎಸ್‌ನ ವೆಂಕಟಾಪುರದ ಯೋಗೇಶ್‌ ಅವರು ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದರು. ಎರಡೂ ಪಕ್ಷದ ಮುಖಂಡರನ್ನು ಸಮಾಧಾನ ಪಡಿಸಲು ಯತ್ನಿಸಿದರು.

ಲೋಕಸಭೆ ಚುನಾವಣೆಗೆ ಜೆಡಿಎಸ್- ಬಿಜೆಪಿ ನಾಯಕರು ಮೈತ್ರಿ ಮಾಡಿಕೊಂಡಿದ್ದಾರೆ, ಆದರೆ ತಳಮಟ್ಟದ ಕಾರ್ಯಕರ್ತರ ನಡುವೆ ಸೈದ್ದಾಂತಿಕ ಹೊಂದಾಣಿಕೆ ಕಷ್ಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಅಸಮಾಧಾನ ಯಾವ ಹಂತಕ್ಕೆ ತಲುಪುತ್ತದೆ ಎಂಬುದನ್ನು ಕಾದು ನೋಡಬೇಕು.

SCROLL FOR NEXT