ಮಹಾರಾಷ್ಟ್ರ ಸರ್ಕಾರಕ್ಕೆ ಜೊಲ್ಲೆ ಮನವಿ
ಮಹಾರಾಷ್ಟ್ರ ಸರ್ಕಾರಕ್ಕೆ ಜೊಲ್ಲೆ ಮನವಿ 
ರಾಜ್ಯ

ಕರ್ನಾಟಕದಲ್ಲಿ ಬರಗಾಲ: ಕೃಷ್ಣಾ-ಹಿರಣ್ಯಕೇಶಿ ನದಿಗಳಿಗೆ ನೀರು ಬಿಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಜೊಲ್ಲೆ ಮನವಿ

Srinivasamurthy VN

ಮುಂಬೈ: ಭೀಕರ ಬರಗಾಲ ಎದುರಿಸುತ್ತಿರುವ ಕರ್ನಾಟಕಕ್ಕೆ ನೀರು ಬಿಡುವಂತೆ ಸಂಸದ ಅಣ್ಣಾ ಸಾಹಿಬ್ ಶಂಕರ್ ಮನವಿ ಮಾಡಿದ್ದಾರೆ.

ಲೋಕಸಭೆ ಚುನಾವಣಾ ಪ್ರಚಾರದ ಭರಾಟೆ ನಡುವೆ ಶನಿವಾರ ಮುಂಬೈಗೆ ತೆರಳಿರುವ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಅವರು, ಮಹಾರಾಷ್ಟ್ರ ಡಿಸಿಎಂ ದೇವೆಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಬೇಸಿಗೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೀರಿಗೆ ಹಾಹಾಕಾರ ಉಂಟಾಗಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ ನೀರು ಹರಿಸುವಂತೆ ಅಣ್ಣಾಸಾಹೇಬ್ ಜೊಲ್ಲೆ ನೇತೃತ್ವದ ನಿಯೋಗ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿದೆ. ಅಣ್ಣಾಸಾಹೇಬ್ ಜೊಲ್ಲೆಗೆ ಶಾಸಕಿ‌ ಶಶಿಕಲಾ‌ ಜೊಲ್ಲೆ, ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಹುಕ್ಕೇರಿ ಶಾಸಕ ನಿಖಿಲ್‌ ಉಮೇಶ ಕತ್ತಿ, ಮಾಜಿ ಸಚಿವ ಶ್ರೀಮಂತ ಪಾಟೀಲ್ ಸಾಥ್ ನೀಡಿದರು.

ಕೃಷ್ಣಾ ಹಾಗೂ ಹಿರಣ್ಯಕೇಶಿ ನದಿಗಳಿಗೆ ನೀರು ಬಿಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನಿಯೋಗ ಮನವಿ ಮಾಡಿದ್ದು, ಕೃಷ್ಣಾ ಮತ್ತು ದೂಧಗಂಗಾ ನದಿ ನೀರು ನಂಬಿಕೊಂಡಿರುವ ಗಡಿ ಭಾಗದ ರೈತರ ಸಂಕಷ್ಟ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಸಾಗಿದೆ.

ಕುಡಿಯುವ ನೀರಿಗಾಗಿ ಪ್ರತಿವರ್ಷ ಬೇಸಿಗೆಯಲ್ಲಿ ಮಹಾರಾಷ್ಟ್ರ ಸರ್ಕಾರವನ್ನು ಬೇಡುವ ಪರಿಸ್ಥಿತಿ ಇದೆ. ಅದೇ ರೀತಿ ಇತ್ತೀಚೆಗೆ ಕೃಷ್ಣಾ ನದಿ ಬರಿದಾಗಿ ಮೀನುಗಳ ಮಾರಣ ಹೋಮವಾಗಿತ್ತು. ಹೀಗಾಗಿ ಜೊಲ್ಲೆ ಅವರು ಪ್ರಚಾರಕ್ಕೆ ಬ್ರೇಕ್ ಹಾಕಿ ಮುಂಬೈಗೆ ಹೋಗಿ ಕೃಷ್ಣಾನದಿಗೆ ನೀರು ಬಿಡುವಂತೆ ಕೋರಿದ್ದಾರೆ.

ಶಾಸಕಿ ಜೊಲ್ಲೆ ಟ್ವೀಟ್

ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಶಾಸಕಿ ಶಶಿಕಲಾ ಜೊಲ್ಲೆ, 'ಕೃಷ್ಣಾ,ಹಾಗೂ ಹಿರಣ್ಯಕೇಶಿ ನದಿಗಳಿಗೆ ಶೀಘ್ರ ನೀರು ಬಿಡಲು ಮನವಿ. ಇಂದು ಮುಂಬೈ ನಗರದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾಗಿ ಮಹಾರಾಷ್ಟ್ರದಿಂದ ಕೃಷ್ಣಾ, ವೇದಗಂಗಾ ನದಿ ಹಾಗೂ ಹಿಡಕಲ್ ಜಲಾಶಯಕ್ಕೆ ನೀರನ್ನು ಬಿಡುವಂತೆ ಮನವಿ‌ ಸಲ್ಲಿಸಲಾಯಿತು.

ಜಾನುವಾರುಗಳಿಗೆ ಹಾಗೂ ಜನರ ನಿತ್ಯ ಉಪಯೋಗಕ್ಕಾಗಿ ನೀರಿಲ್ಲದೇ ತೊಂದರೆ ಅನುಭವಿಸುತ್ತಿದ್ದು ಶೀಘ್ರ ಕೃಷ್ಣಾ ಹಾಗೂ ಹಿರಣ್ಯಕೇಶಿ ನದಿಗಳಿಗೆ ನೀರು ಬಿಡುವಂತೆ ಮನವಿ ನೀಡಿದ್ದು,ಸಕಾರಾತ್ಮಕವಾಗಿ ಸ್ಪಂದಿಸಿದ ಮಾನ್ಯ ಉಪಮುಖ್ಯಮಂತ್ರಿಗಳು ಸ್ಪಂದಿಸಿದ್ದು, ತಕ್ಷಣವೇ ನೀರು ಬಿಡುವಂತೆ ಭರವಸೆ ನೀಡಿದ್ದು,ಕ್ಷೇತ್ರದ ಜನರ ಪರವಾಗಿ ಅವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

SCROLL FOR NEXT