ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸದ್ದು ಮಾಡುತ್ತಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಸಂಬಂಧ ಬಿಜೆಪಿ ನಾಯಕರ ವಿರುದ್ಧ ರಾಜ್ಯ ಕಾಂಗ್ರೆಸ್ ಹರಿಹಾಯ್ದಿದೆ.
ಈ ಸಂಬಂಧ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಕಾಂಗ್ರೆಸ್, ಹಿರಿತನವು ಹೇಡಿಂಗೆ ಗುರುತನವು ಮೂಢಂಗೆ ದೊರೆತನವು ನಾಡ ನೀಚಂಗೆ-ದೊರೆದಿಹರೆ ಧರೆಯೆಲ್ಲ ಕೆಡುಗು ಸರ್ವಜ್ಞ...ಸರ್ವಜ್ಞನ ಈ ವಚನವು ಬಿಜೆಪಿಯವರಿಗೆ ಅತ್ಯಂತ ಸೂಕ್ತವಾಗಿ ಹೊಂದುತ್ತದೆ ಎಂದು ಕಿಡಿಕಾರಿದೆ.
ಬಿಜೆಪಿಯ ಮೂಡರಿಗೆ ತಾವೇನು ಮಾಡುತ್ತಿದ್ದೇವೆ, ಏನು ಮಾತಾಡುತ್ತಿದ್ದೇವೆ ಎಂಬ ಕನಿಷ್ಠ ಜ್ಞಾನವೂ ಇಲ್ಲದೆ ನಾಡಿನ ನಂ1 ಮಾನಗೇಡಿಗಳಾಗಿದ್ದಾರೆ, ಅರ್.ಅಶೋಕ ಅವರೇ ಪ್ರಜ್ವಲ್ ರೇವಣ್ಣ ಕಾಂಗ್ರೆಸ್ ಪಕ್ಷದವನಾ? ಕಾಂಗ್ರೆಸ್ ಟಿಕೆಟ್ ಕೊಡಲು ಹೇಗೆ ಸಾಧ್ಯ? ಯಾವುದೇ ಮೈತ್ರಿ ಪಕ್ಷಕ್ಕೆ ಕ್ಷೇತ್ರ ಬಿಟ್ಟುಕೊಡಲು ಸಾಧ್ಯವೇ ಹೊರತು ಟಿಕೆಟ್ ಕೊಡಲು ಸಾಧ್ಯವೇ? ಇಷ್ಟಕ್ಕೂ ಜೆಡಿಎಸ್ ಜೊತೆಗಿನ ನಮ್ಮ ಕರಾಳ ಮೈತ್ರಿಯ ದಿನಗಳ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣನ ಈ ಕರ್ಮಕಾಂಡಗಳು ಬೆಳಕಿಗೆ ಬಂದಿತ್ತೇ?
ಆದರೆ ಬಿಜೆಪಿ ಸೀಟು ಹಂಚಿಕೆ ಮಾಡಿಕೊಳ್ಳುವ ಮುಂಚೆಯೇ 2023ರ ಡಿಸೆಂಬರ್ ರಲ್ಲಿ ಪ್ರಜ್ವಲ್ ಬಗ್ಗೆ ಪೂರ್ಣ ಮಾಹಿತಿ ನಿಮಗಿತ್ತಲ್ಲವೇ? ನೀವೇಕೆ ಟಿಕೆಟ್ ನೀಡಿದಿರಿ (ನಿಮ್ಮದೇ ಲಾಜಿಕ್ ಪ್ರಕಾರ) 2023ರ ಡಿಸೆಂಬರ್ ನಲ್ಲೇ ಪ್ರಜ್ವಲ್ ರೇವಣ್ಣ ತಮ್ಮ ಅಶ್ಲೀಲ ವಿಡಿಯೋಗಳಿಗೆ ತಡೆಯಾಜ್ಞೆ ತಂದಿದ್ದರಲ್ಲವೇ? ಅದರ ಮಾಹಿತಿ ನಿಮಗಿದ್ದರೂ ಏಕೆ ಬೆಂಬಲಿಸಿದಿರಿ? ಏಕೆ ಟಿಕೆಟ್ ನೀಡಿದಿರಿ? ಪ್ರಜ್ವಲ್ ಗೆ ಮತ ನೀಡಿದರೆ ನನಗೆ ಶಕ್ತಿ ಸಿಕ್ಕಂತೆ ಎಂದು ಮೋದಿ ಹೇಳಿದ್ದೇಕೆ? ಇದಕ್ಕೆ ಉತ್ತರ ನೀಡುವಿರಾ ಬಿಜೆಪಿ ಕರ್ನಾಟಕದ ಬೃಹಸ್ಪತಿಗಳೇ? ಎಂದು ಪ್ರಶ್ನಿಸಿದೆ.