ಹೊಳೆ ನರಸೀಪುರದಲ್ಲಿರುವ ಎಚ್.ಡಿ ರೇವಣ್ಣ ಮನೆ 
ರಾಜ್ಯ

ಪೆನ್‌ಡ್ರೈವ್ ಪ್ರಕರಣದಿಂದ ಹೈರಾಣ: ದೇವರ ಮೊರೆ ಹೋದ ರೇವಣ್ಣ; ಹೊಳೇನರಸೀಪುರದ ಮನೆಯಲ್ಲಿ ಹೋಮ-ಹವನ!

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಂ.1 ಆರೋಪಿಯಾಗಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೊಳೆನರಸೀಪುರ ಪಟ್ಟಣದ ತಮ್ಮ ನಿವಾಸದಲ್ಲಿ ಮಂಗಳವಾರ ವಿವಿಧ ಹೋಮ ಹವನ ನಡೆಸಿದರು.

ಹೊಳೆನರಸಿಪುರ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಂ.1 ಆರೋಪಿಯಾಗಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೊಳೆನರಸೀಪುರ ಪಟ್ಟಣದ ತಮ್ಮ ನಿವಾಸದಲ್ಲಿ ಮಂಗಳವಾರ ವಿವಿಧ ಹೋಮ ಹವನ ನಡೆಸಿದರು.

ಮನೆ ಕೆಲಸದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣದ ಆರೋಪಿಯಾಗಿರುವ ಜೆಡಿಎಸ್‌ ಶಾಸಕ ಎಚ್‌.ಡಿ. ರೇವಣ್ಣ ಎಸ್‌ಐಟಿಯಿಂದ ನೋಟಿಸ್ ಜಾರಿಯಾಗುತ್ತಲೇ, ಹೊಳೆನರಸೀಪುರದ ತಮ್ಮ ಮನೆಯಲ್ಲಿ ಬುಧವಾರ ಬೆಳಿಗ್ಗೆ ಹೋಮ, ವಿಶೇಷ ಪೂಜೆ ನೆರವೇರಿಸಿ ದೇವರ ಮೊರೆ ಹೋಗಿದ್ದಾರೆ.

ಕುಟುಂಬದ ಸದಸ್ಯರ ಹೆಸರಿನಲ್ಲಿ ವಿಶೇಷವಾಗಿ ಅವರ ಪುತ್ರ ಪ್ರಜ್ವಲ್ ರೇವಣ್ಣ ಹೆಸರಿನಲ್ಲಿ ಪೂಜಾ ಕೈಂಕರ್ಯ ನೆರವೇರಿಸಿದರು. ವಿವಿಧ ದೇವರಿಗೆ ಪೂಜೆಗಳು ಬೆಳಿಗ್ಗೆ 5.05 ರಿಂದ ಆರಂಭವಾಗಿ 11.55 ಕ್ಕೆ ಮುಕ್ತಾಯಗೊಂಡವು. ರೇವಣ್ಣ ಮತ್ತು ಅವರ ಪತ್ನಿ ಭವಾನಿ ತಮ್ಮ ನಿವಾಸದಲ್ಲಿ ಹೋಮದಲ್ಲಿ ಪಾಲ್ಗೊಳ್ಳುವ ಮೊದಲು ಹರದನಹಳ್ಳಿಯ ದೇವೇಶ್ವರ ದೇವಸ್ಥಾನ ಮತ್ತು ಹೊಳೆನರಸೀಪುರ ಪಟ್ಟಣದ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದಲ್ಲಿ ಪ್ರಜ್ವಲ್ ರೇವಣ್ಣ ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ನಾಲ್ವರು ಪುರೋಹಿತರ ತಂಡ ಶತ್ರು ಸಂಹಾರ ಹಾಗೂ ಶಾಂತಿ ಹೋಮಗಳನ್ನು ನೆರವೇರಿಸಿದ್ದು, ರೇವಣ್ಣ ದಂಪತಿ ಪಾಲ್ಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ. ತಮ್ಮ ವಿರುದ್ಧ ದಾಖಲಾದ ಪ್ರಕರಣದಿಂದ ಅಸಮಾಧಾನಗೊಂಡಿರುವ ರೇವಣ್ಣ ಅವರು ತಮ್ಮ ಆಪ್ತರು ಹಾಗೂ ಪಕ್ಷದ ಹಿರಿಯ ನಾಯಕರ ಜತೆ ಮಾತನಾಡುವುದನ್ನೇ ನಿಲ್ಲಿಸಿದ್ದಾರೆ ಎನ್ನಲಾಗಿದೆ. ಅವರ ಸಹೋದರ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕೂಡ ಪೆನ್ ಡ್ರೈವ್ ಹಗರಣದಿಂದ ಅಸಮಾಧಾನಗೊಂಡಿದ್ದು, ರೇವಣ್ಣ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಪಕ್ಷದ ಕಾರ್ಯಕರ್ತರು ಮತ್ತು ಗ್ರಾಮಸ್ಥರಿಂದ ತುಂಬಿ ತುಳುಕುತ್ತಿದ್ದ ಹೊಳೆನರಸೀಪುರದ ಹಾಸನ-ಮೈಸೂರು ರಸ್ತೆಯಲ್ಲಿರುವ ಅವರ ನಿವಾಸವು ಕೆಲವು ದಿನಗಳ ಹಿಂದೆ ಲೈಂಗಿಕ ದೌರ್ಜನ್ಯದ ಆರೋಪಗಳು ಮತ್ತು ವೀಡಿಯೊಗಳು ಹೊರಬಂದಾಗಿನಿಂದ ನಿರ್ಜನವಾಗಿದೆ. ಪ್ರಕರಣ ಹೊರ ಬಂದಾಗಿನಿಂದ ಬಳಿಕ ಜೆಡಿಎಸ್‌ನ ಯಾವ ನಾಯಕರೂ ಅವರ ನಿವಾಸಕ್ಕೆ ಭೇಟಿ ನೀಡಿಲ್ಲ.

ಮಂಗಳವಾರ ತಡರಾತ್ರಿ ಬೆಂಗಳೂರಿನಿಂದ ಹೊಳೆನರಸೀಪುರಕ್ಕೆ ಬಂದಿದ್ದ ರೇವಣ್ಣ, ಬುಧವಾರ ಎಲ್ಲ ವಿಧಿವಿಧಾನಗಳು ಮುಗಿಯುವವರೆಗೂ ತಮ್ಮ ನಿವಾಸದಿಂದ ಹೊರಗೆ ಬಂದಿರಲಿಲ್ಲ. ಮಧ್ಯಾಹ್ನ 2 ಗಂಟೆ ಸುಮಾರಿಗೆ ರೇವಣ್ಣ ಮತ್ತು ಭವಾನಿ ಬೆಂಗಳೂರಿಗೆ ತೆರಳಲು ಕಾರು ಹತ್ತಿದ್ದಾರೆ. ತಮ್ಮ ನಿವಾಸದ ಹೊರಗೆ ಬೆಳಗ್ಗೆಯಿಂದಲೇ ಕಾದು ಕುಳಿತಿದ್ದ ಮಾಧ್ಯಮದವರನ್ನು ನೋಡಿದ ರೇವಣ್ಣ, ಪ್ರಕರಣದ ತನಿಖೆಗೆ ರಚಿತವಾಗಿರುವ ವಿಶೇಷ ತನಿಖಾ ತಂಡದಿಂದ ತನಿಖೆ ಎದುರಿಸುವುದಾಗಿ ಹೇಳಿದರು.

ಇದು ತಮ್ಮ ವಿರುದ್ಧ ನಡೆದಿರುವ ಷಡ್ಯಂತ್ರವಾಗಿದ್ದು, ಮುಂದಿನ ಕ್ರಮವನ್ನು ಶೀಘ್ರವೇ ನಿರ್ಧರಿಸುವುದಾಗಿ ಹೇಳಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ ಮತ್ತು ಯಾವುದೇ ಪರಿಸ್ಥಿತಿಯನ್ನು ಎದುರಿಸುವ ಶಕ್ತಿ ನನ್ನಲ್ಲಿದೆ ಎಂದು ಅವರು ಹೇಳಿದರು.

ಸೋಮವಾರ ಎಸ್‌ಐಟಿ ಅವರ ನಿವಾಸದ ಬಾಗಿಲಿಗೆ ನೋಟಿಸ್ ಅಂಟಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ರೇವಣ್ಣ ದೇವರ ಮೇಲೆ ಅಪಾರ ನಂಬಿಕೆಯುಳ್ಳವರಾಗಿದ್ದು, ಆಗಾಗ್ಗೆ ತಮ್ಮ ಮನೆಯಲ್ಲಿ ಶೃಂಗೇರಿ, ಮೈಸೂರು ಮತ್ತು ತಿರುಪತಿಯ ಅರ್ಚಕರಿಂದ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ.

2019 ರ ಸಂಸತ್ತಿನ ಚುನಾವಣೆಗೆ ಮುಂಚಿತವಾಗಿ, ಪ್ರಜ್ವಲ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಮೊದಲು ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಕುಟುಂಬದವರು ಬಹು ದೊಡ್ಡ ಶತ್ರು ಸಂಹಾರ ಮತ್ತು ಅಷ್ಟ ದಿಗ್ಬಂಧನ ಪೂಜೆ ಪುನಸ್ಕಾರಗಳನ್ನು ನೆರವೇರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT