ಶಿವಮೊಗ್ಗ: ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಯೊಬ್ಬರ ಹೊಟ್ಟೆಯಿಂದ ಮೊಬೈಲ್ ಫೋನ್ ನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದಿದ್ದಾರೆ.
ಪರಶುರಾಮ್ (26) ಎಂಬ ವಿಚಾರಣಾಧೀನ ಕೈದಿ ಮಾರ್ಚ್ 28ರಂದು ಹೊಟ್ಟೆನೋವಿನಿಂದ ಬಳಲುತ್ತಿದ್ದು, ಈ ವೇಳೆ ಕಾರಾಗೃಹದ ಸಿಬ್ಬಂದಿ ಜೈಲು ಆವರಣದಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ,
ಈ ವೇಳೆ ಕೆಲ ಸಮಯದ ಹಿಂದೆ ಕಲ್ಲು ನುಂಗಿದ್ದೆ ಎಂದು ವೈದ್ಯರ ಬಳಿ ಹೇಳಿಕೊಂಡಿದ್ದಾನೆ. ಬಳಿಕ ವೈದ್ಯರು ಕಲ್ಲು ಸೇವನೆಯಿಂದ ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂದು ವರದಿ ಮಾಡಿ, ಚಿಕಿತ್ಸೆ ನೀಡಿದ್ದಾರೆ.
ಏಪ್ರಿಲ್ 1 ರಂದು ಅವರ ಸ್ಥಿತಿ ಮತ್ತೆ ಹದಗೆಟ್ಟಿದೆ. ಬಳಿಕ ಪರಶುರಾಮ್‌ಗೆ ವಿಶೇಷ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಜೈಲು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಏಪ್ರಿಲ್ 6 ರಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಏಪ್ರಿಲ್ 25 ರಂದು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು, ಪರಶುರಾಮ್ ಅವರ ಹೊಟ್ಟೆಯಿಂದ ಮೊಬೈಲ್ ಫೋನ್'ನ್ನು ಹೊರ ತೆಗೆದಿದ್ದಾರೆ.
ಕಾರಾಗೃಹದಲ್ಲಿರುವ ಸಮಯದಲ್ಲಿ ಮೊಬೈಲ್ ಪೋನ್ ಹೊಂದಿದ್ದ ಹಿನ್ನೆಲೆಯಲ್ಲಿ ಇದೀಗ ಪರಶುರಾಮ್ ವಿರುದ್ಧ ಕರ್ನಾಟಕ ಕಾರಾಗೃಹಗಳ (ತಿದ್ದುಪಡಿ) ಕಾಯ್ದೆ - 2022 ರ ಸೆಕ್ಷನ್ 42 ರ ಅಡಿಯಲ್ಲಿ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.