ಚಾಮರಾಜನಗರ: ಚಾಮರಾಜನಗರದಲ್ಲಿ ಧಾರಾಕಾರ ಮಳೆ ಹಾಗೂ ವಿಪರೀತ ಗಾಳಿಯ ಪರಿಣಾಮ 25 ಕೋಟಿ ರೂಪಾಯಿ ಮೌಲ್ಯದ ಬಾಳೆ ಬೆಳೆ ನಾಶವಾಗಿದೆ.
900 ರೈತರು ಈ ಬೆಳೆ ನಷ್ಟ ಎದುರಿಸಿದ್ದು, 1,250 ಎಕರೆ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. ಉತ್ತಮ ಬೆಲೆಯನ್ನು ನಿರೀಕ್ಷಿಸುತ್ತಿದ್ದ ರೈತರು ಮುಂದಿನ ವಾರ ಬೆಳೆ ಕಟಾವಿಗೆ ನಿರ್ಧರಿಸಿದ್ದರು. ಈಗ ತೀವ್ರ ಮಳೆಯ ಪರಿಣಾಮ ರೈತರ ಬೆಳೆಗಳು ಸಂಪೂರ್ಣ ಹಾನಿಗೀಡಾಗಿವೆ. ಈ ಮಳೆಯ ಪರಿಣಾಮದಿಂದಾಗಿ ಬಾಳೆ ಬೆಳೆ ಮಾತ್ರವಲ್ಲದೇ ಪಪ್ಪಾಯ ಬೆಳೆಯೂ ನೆಲಕಚ್ಚಿದೆ.
ಗುಂಡ್ಲುಪೇಟೆಯಲ್ಲಿ ಅತಿ ಹೆಚ್ಚು ಅಂದರೆ 700 ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಚಾಮರಾಜನಗರ, ಕೊಳ್ಳೆಗಾಲ, ಯಳಂದೂರು, ಹನೂರು ತಾಲೂಕುಗಳಲ್ಲಿಯೂ ಬೆಳೆ ಹಾನಿಯಾಗಿದೆ.
ತೋಟಗಾರಿಕಾ ಇಲಾಖೆ ಬೆಳೆ ನಷ್ಟದ ಬಗ್ಗೆ ಪ್ರಾಥಮಿಕ ಹಂತದ ಮಾಹಿತಿಯನ್ನು ಸಂಗ್ರಹಿಸಿದ್ದು, ಈ ವಾರದಲ್ಲಿ ವಿಸ್ತೃತ ವರದಿ ನೀಡಲಿದೆ. ದತ್ತಾಂಶಗಳ ಆರಂಭಿಕ ಸಂಗ್ರಹಣೆಗೆ ಒತ್ತು ನೀಡುತ್ತಿರುವ ಅಧಿಕಾರಿಗಳಿಗೆ ರೈತರೊಂದಿಗೆ ಸಮನ್ವಯ ಸಾಧಿಸಲು ನಿರ್ದೇಶಿಸಲಾಗಿದೆ. ರೈತರು ಎಕರೆಗೆ ಕನಿಷ್ಠ 2 ಲಕ್ಷ ನಷ್ಟ ಅನುಭವಿಸಿದ್ದಾರೆ.
ಪಂಪ್‌ಸೆಟ್‌ಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆಯಾಗದಿದ್ದರೂ, ರೈತರು ಉತ್ತಮ ಬೆಳೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ಅದು ಈಗ ಮಳೆಯಿಂದಾಗಿ ಹಾನಿಗೀಡಾಗಿದೆ. ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಬೆಳೆ ನಷ್ಟದ ವರದಿಗಳು ಸಿದ್ಧವಾದ ನಂತರ ರಾಜ್ಯ ವಿಪತ್ತು ಪರಿಹಾರ ನಿಧಿ ಮಾರ್ಗಸೂಚಿಗಳ ಪ್ರಕಾರ ಪರಿಹಾರವನ್ನು ಭರವಸೆ ನೀಡಿದ್ದಾರೆ. ಏತನ್ಮಧ್ಯೆ, ರೈತರು ಸಾಲದ ಸುಳಿಯಿಂದ ಪಾರಾಗಲು ತಾವು ಮಾಡಿರುವ ವೆಚ್ಚದ ಮೊತ್ತವನ್ನು ಪರಿಹಾರವಾಗಿ ನೀಡಲು ಒತ್ತಾಯಿಸುತ್ತಿದ್ದಾರೆ.
ಮೈಸೂರು ತಾಲೂಕಿನ ಕತ್ತೂರು ಹಾಗೂ ಇತರೆಡೆ ಮಳೆಯಿಂದಾಗಿ ರೈತರು ಬಾಳೆ ತೋಟಗಳನ್ನು ಕಳೆದುಕೊಂಡಿದ್ದಾರೆ. ಕಲ್ಲಂಗಡಿ ಬೆಳೆಗೂ ಹಾನಿಯಾಗಿದೆ ಎಂಬ ವರದಿಗಳಾಗಿವೆ.
ಆನೆ ಕಾಟ: ಜಾಗರೂಕರಾಗಿರುವ ರೈತರು
ಮಳೆಯ ಆರ್ಭಟದ ನಡುವೆಯೇ ರೈತರು ಗುಂಪು ಗುಂಪಾಗಿ ಡೋಲು ಬಾರಿಸುತ್ತಾ, ಪಟಾಕಿ ಸಿಡಿಸುತ್ತಾ, ಪಂಜು ಉರಿಸುವ ಮೂಲಕ ಆನೆಗಳಿಂದ ಕಬ್ಬಿನ ಗದ್ದೆಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಕಬ್ಬು ಬೆಳೆಗಾರರು ಗಡಿ ಪ್ರದೇಶಗಳಲ್ಲಿ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ ಮತ್ತು ಅರಣ್ಯದ ಅಂಚಿನಲ್ಲಿರುವವರು ಆನೆಗಳು ಯಾವಾಗ ಬೇಕಾದರೂ ತಮ್ಮ ಬೆಳೆಗೆ ದಾಳಿ ಮಾಡಿ ನಾಶಪಡಿಸಬಹುದು ಎಂಬ ಭಯದಲ್ಲಿದ್ದಾರೆ.