ಮಡಿಕೇರಿ: 10ನೇ ತರಗತಿ ಬಾಲಕಿ ಹತ್ಯೆ ನಡೆದ ಎರಡು ದಿನಗಳ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. ಮಡಿಕೇರಿ ತಾಲ್ಲೂಕ್ ಹಮ್ಮಿಯಾಳದ ಪ್ರಕಾಶ್ ಓಂಕಾರಪ್ಪ (34) ಬಂಧಿತ ಆರೋಪಿ. ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಆತನ ವಿರುದ್ಧ ಐಪಿಸಿ ಸೆ7ನ್ 320, 307, ಪೋಕ್ಸೊ ಕಾಯ್ದೆ ಮತ್ತು ಶಸಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ನಿಶ್ಚಿತಾರ್ಥ ಮುರಿದು ಬಿದ್ದ ಹತಾಶೆಯಿಂದ ಪ್ರಕಾಶ್ ಓಂಕಾರಪ್ಪ ಅಮಾನುಷವಾಗಿ ಸೊರ್ಲಬಿ ಪ್ರೌಢಶಾಲೆಯ 10 ನೇ ತರಗತಿ ವಿದ್ಯಾರ್ಥಿನಿ ಯುಎಸ್ ಮೀನಾ ಅವರನ್ನು ಮೇ 9 ರಂದು ಹತ್ಯೆ ಮಾಡಿದ್ದ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ ಪಿ ಕೆ. ರಾಮಾನುಜನ್, ಸಂತ್ರಸ್ತೆಯೊಂದಿಗಿನ ಮದುವೆ ಮುರಿದು ಬಿದ್ದರಿಂದ ಆರೋಪಿ ಹತಾಶನಾಗಿದ್ದ ಎಂದು ಸ್ಪಷ್ಪಪಡಿಸಿದರು.
ಮೇ 9 ರಂದು ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡ ನಂತರ ಮೀನಾ ಮತ್ತು ಆರೋಪಿ ಪ್ರಕಾಶ್ ನಿಶ್ಚಿತಾರ್ಥ ಸಮಾರಂಭವನ್ನು ಮಾಡಲಾಗಿತ್ತು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ. 50.24 ರಷ್ಟು ಫಲಿತಾಂಶದೊಂದಿಗೆ ಬಾಲಕಿ ಸಂಭ್ರಮಾಚರಣೆ ನಡೆಸುತ್ತಿರುವಂತೆಯೇ ಅದೇ ದಿನ ಮಧ್ಯಾಹ್ನ ಆರೋಪಿಯೊಂದಿಗೆ ಆಕೆಯ ನಿಶ್ಚಿತಾರ್ಥವನ್ನು ಪೋಷಕರು ನಿಗದಿಮಾಡಿದ್ದರು.
ಮೇ 9 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆ ನಡುವೆ ನಿಶ್ಚಿತಾರ್ಥ ಸಮಾರಂಭ ನಡೆದಿತ್ತು. ಆದರೆ, ಗ್ರಾಮಸ್ಥರು ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಿದ್ದರಿಂದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಅದೇ ದಿನ ಬಾಲಕಿ ಮನೆಗೆ ಭೇಟಿ ನೀಡಿದ್ದು, ಬಾಲಕಿಗೆ 18 ವರ್ಷ ತುಂಬಿದ ನಂತರ ಮದುವೆ ಮಾಡುವಂತೆ ಬಾಲಕಿ ಹಾಗೂ ಹುಡುಗನ ಪೋಷಕರಿಗೆ ಸಮಾಲೋಚನೆ ಮಾಡಿದರು. ಎರಡು ಕುಟುಂಬಗಳು ಕಾನೂನಿಗೆ ಬದ್ಧವಾಗಿರುವುದಾಗಿ ಹೇಳಿದ ನಂತರ ಅಧಿಕಾರಿಗಳು ವಾಪಸ್ಸಾಗಿದ್ದರು.
ಅಧಿಕಾರಿಗಳು ವಾಪಸ್ಸಾದ ಕೆಲವೇ ಗಂಟೆಗಳಲ್ಲಿ ಬಾಲಕಿ ಮನೆಗೆ ಭೇಟಿ ನೀಡಿದ ಪ್ರಕಾಶ್, ಆತನೊಂದಿಗೆ ಮದುವೆ ಮಾಡಿಕೊಡುವಂತೆ ಪೋಷಕರನ್ನು ಒತ್ತಾಯಿಸಿದ್ದಾನೆ. ಈ ವೇಳೆ ಬಾಲಕಿ ತಾಯಿ ಮದುವೆಗೆ ವಿರೋಧ ವ್ಯಕ್ತಪಡಿಸಿದಾಗ ಪ್ರಕಾಶ್ ಹಲ್ಲೆ ನಡೆಸಿದ್ದಾನೆ. ಅಲ್ಲದೇ, ಬಾಲಕಿಯನ್ನು ಮನೆಯಿಂದ ಹೊರಗೆ ಎಳೆದು ತಂದು ಆಕೆಯ ತಲೆ ಕತ್ತರಿಸಿದ್ದಾನೆ. ಸಂತ್ರಸ್ತೆ ಮನೆಯವರಿಗೆ ಪರಿಚಿತನಾಗಿದ್ದಆರೋಪಿ, ಆಕೆಯ ಮನೆಯಿಂದಲೇ ಮಚ್ಚನ್ನು ತೆಗೆದುಕೊಂಡು ಬಂದಿದ್ದು,ಅದರಿಂದಲೇ ಆಕೆಯನ್ನು ಹತ್ಯೆ ಮಾಡಿದ್ದಾನೆ. ಬಳಿಕ ಸಂತ್ರಸ್ತೆಯ ಕತ್ತರಿಸಿದ ತಲೆಯೊಂದಿಗೆ ಪರಾರಿಯಾಗಿದ್ದ ಎಂದು ಎಸ್ ಪಿ ತಿಳಿಸಿದರು.
ಬಾಲಕಿ ತಲೆ ಕತ್ತರಿಸಿದ ನಂತರ ತನ್ನ ಮನೆಗೆ ತೆರಳಿದ ಆರೋಪಿ, ಲೋಡೆಡ್ ಗನ್ ನೊಂದಿಗೆ ಪರಾರಿಯಾಗಿದ್ದ. ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಿದ ಬಾಲಕಿಯ ಅಕ್ಕನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ. ಆದರೆ, ಬಾಲಕಿಯ ಪೋಷಕರಿಗೆ ಪೊಲೀಸರು ರಕ್ಷಣೆ ನೀಡಿದ್ದು, ಶನಿವಾರ ಬೆಳ್ಳಂಬೆಳಗ್ಗೆ ಗರ್ವಾಲೆಯಲ್ಲಿ ಆರೋಪಿಯನ್ನು ಬಂಧಿಸಲಾಯಿತು. ಬಂಧನದ ನಂತರ ಮಹಜರ್ ಪ್ರಕ್ರಿಯೆಯಲ್ಲಿ ಬಾಲಕಿಯ ಶಿರಚ್ಛೇದಿತ ತಲೆಯನ್ನು ಅಪರಾಧ ಸ್ಥಳದಿಂದ ಸುಮಾರು 100 ಮೀಟರ್ ದೂರದಲ್ಲಿ ಪಡೆಯಲಾಯಿತು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ವಿವರಿಸಿದರು.