ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ದಿನಕ್ಕೊಂದು ಹೊಸ ಹೊಸ ಹೆಸರುಗಳು ಸೇರ್ಪಡೆಯಾಗುತ್ತಿದ್ದು, ಇದೀಗ ಪ್ರಕರಣದಲ್ಲಿ ಹೊಸದಾಗಿ ಶಾಸಕ ಎ ಮಂಜು ಹೆಸರು ಕೇಳಿಬರುತ್ತಿದೆ.
ಹೌದು.. ಪ್ರಜ್ವಲ್ ರೇವಣ್ಣರದ್ದು ಎನ್ನಲಾದದ ಸೆಕ್ಸ್ ಹಗರಣದ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಇದೀಗ ಅರಕಲಗೂಡು ಶಾಸಕ ಎ. ಮಂಜು ಅವರ ಹೆಸರು ಕೇಳಿಬರುತ್ತಿವೆ.
ಪೆನ್ ಡ್ರೈವ್ ಹಂಚಿಕೆಯ ಆರೋಪ ಹೊತ್ತಿರುವ ನವೀನ್ ಗೌಡ ಈ ಸಂಬಂಧ ತನ್ನ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದು, ಅರಕಲಗೂಡು ಶಾಸಕ ಎ. ಮಂಜು ಅವರೇ ಪೆನ್ ಡ್ರೈವ್ ಹಂಚಿಕೆ ಮಾಡಿರಬಹುದು ಎಂದು ಶಂಕಿಸಿದ್ದಾರೆ. ಅಲ್ಲದೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳುತ್ತಿರುವ ಮಹಾ ನಾಯಕ ಇವರೇ ಎಂದು ಆರೋಪ ಮಾಡಿದ್ದಾರೆ.
ಈ ಬಗ್ಗೆ ಫೇಸ್‌ಬುಕ್‌ನಲ್ಲಿ ನವೀನ್ ಗೌಡ ಹಾಕಿರುವ ಪೋಸ್ಟ್‌ನಲ್ಲಿ ಜೆಡಿಎಸ್ ಶಾಸಕ ಎ. ಮಂಜು ವಿರುದ್ಧ ನೇರವಾಗಿ ಆರೋಪ ಮಾಡಲಾಗಿದೆ. ಆದರೆ, ನವೀನ್ ಗೌಡ ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಎಸ್‌ಐಟಿ ಅಧಿಕಾರಿಗಳು ತೀವ್ರ ಶೋಧ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಪೋಸ್ಟ್‌ನಲ್ಲೇನಿದೆ?
ನನಗೆ ಏಪ್ರಿಲ್20 ರಂದು ಸಿಕ್ಕ ಪೆನ್ ಡ್ರೈವ್ ಅನ್ನು ಅರಕಲಗೂಡು ಶಾಸಕ ಮಂಜು ಅವರಿಗೆ ಕೊಟ್ಟಿದ್ದೇನೆ. ಏಪ್ರಿಲ್ 21 ರಂದು ಅರಕಲಗೂಡು ಮಾರುತಿ ಕಲ್ಯಾಣ ಮಂಟಪದಲ್ಲಿ ಅವರಿಗೆ ನೀಡಿದ್ದೇನೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ವಿಡಿಯೊವನ್ನು ವೈರಲ್ ಮಾಡಿದ್ದರ ಹಿಂದೆ ಮಹಾ ನಾಯಕನ ಕೈವಾಡ ಇದೆ ಎಂದು ಹೇಳಿದ್ದರು. ಆ ಮಹಾ ನಾಯಕ ಅರಕಲಗೂಡು ಶಾಸಕರೇ ಇರಬಹುದು ಎಂದು ಪೋಸ್ಟ್ ಮಾಡಿದ್ದಾನೆ. ಸದ್ಯ ನವೀನ್ ಗೌಡ ಪೋಸ್ಟ್ ಎಲ್ಲೆಡೆ ವೈರಲ್ ಆಗಿದೆ.
ಎ. ಮಂಜುಗೆ ಸಂಕಷ್ಟ?
ಈಗಾಗಲೇ ಎಸ್‌ಐಟಿ ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸುತ್ತಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಈ ಮಧ್ಯೆ ಪೆನ್‌ಡ್ರೈವ್ ಅನ್ನು ಹಾಸನ ಜಿಲ್ಲಾದ್ಯಂತ ಹಂಚಿಕೆ ಮಾಡಿರುವ ಆರೋಪವನ್ನು ಹೊತ್ತಿರುವ ನವೀನ್ ಗೌಡ ಮಾಡಿರುವ ಪೋಸ್ಟ್ ಈಗ ಚರ್ಚೆಗೆ ಎಡೆಮಾಡಿ ಕೊಟ್ಟಿದೆ. ಇದೇ ಪೋಸ್ಟ್ ಅನ್ನು ಆಧಾರವಾಗಿಟ್ಟುಕೊಂಡು ಎಸ್‌ಐಟಿ ಅಧಿಕಾರಿಗಳು ಶಾಸಕ ಮಂಜು ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
ಇಲ್ಲವೇ ಕಾರಣ ಕೇಳಿ ನೋಟಿಸ್ ಜಾರಿ ಮಾಡಬಹುದು ಅಥವಾ ಈ ಪೋಸ್ಟ್ ಅನ್ನು ನವೀನ್ ಗೌಡ ಯಾವ ಐಪಿ ಅಡ್ರೆಸ್‌ನಿಂದ ಮಾಡಿದ್ದಾನೆ ಎಂಬುದನ್ನು ತಿಳಿದುಕೊಂಡು ಶೋಧ ಕಾರ್ಯ ನಡೆಸಬಹುದು ಎಂದು ಹೇಳಲಾಗಿದೆ.