ಕರ್ನಾಟಕ ಹೈಕೋರ್ಟ್ TNIE
ರಾಜ್ಯ

ರಾಜಕಾಲುವೆ, ಸಾರ್ವಜನಿಕ ಮಾರ್ಗದಲ್ಲಿ ಬಡಾವಣೆ ನಿರ್ಮಾಣ: ರಾಜ್ಯ ಸರ್ಕಾರಕ್ಕೆ 'ಹೈ' ನೋಟಿಸ್‌

ಬೆಂಗಳೂರು ಉತ್ತರ ಉಪ ವಲಯದ ಯಲಹಂಕ ತಾಲ್ಲೂಕಿನ ಹೊಸಹಳ್ಳಿ ಗ್ರಾಮದಲ್ಲಿನ ರಾಜಕಾಲುವೆ ಮತ್ತು ಸಾರ್ವಜನಿಕ ಮಾರ್ಗದಲ್ಲಿ ಸ್ಯಾಮಿಸ್‌ ಡ್ರೀಮ್‌ ಲ್ಯಾಂಡ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯು ಬಡಾವಣೆ ಅಭಿವೃದ್ಧಿಪಡಿಸಿರುವ ವಿಚಾರ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಈಚೆಗೆ ನೋಟಿಸ್‌ ಜಾರಿ ಮಾಡಿದೆ.

ಬೆಂಗಳೂರು: ಬೆಂಗಳೂರು ಉತ್ತರ ಉಪ ವಲಯದ ಯಲಹಂಕ ತಾಲ್ಲೂಕಿನ ಹೊಸಹಳ್ಳಿ ಗ್ರಾಮದಲ್ಲಿನ ರಾಜಕಾಲುವೆ ಮತ್ತು ಸಾರ್ವಜನಿಕ ಮಾರ್ಗದಲ್ಲಿ ಸ್ಯಾಮಿಸ್‌ ಡ್ರೀಮ್‌ ಲ್ಯಾಂಡ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯು ಬಡಾವಣೆ ಅಭಿವೃದ್ಧಿಪಡಿಸಿರುವ ವಿಚಾರ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಈಚೆಗೆ ನೋಟಿಸ್‌ ಜಾರಿ ಮಾಡಿದೆ.

ಬೆಂಗಳೂರಿನ ಕೆ ಕೆಂಪಣ್ಣ ಸೇರಿದಂತೆ ಹೊಸಹಳ್ಳಿಯ ಗ್ರಾಮದ 21 ಮಂದಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಆರ್‌ ದೇವದಾಸ್‌ ಮತ್ತು ಜೆ ಎಂ ಖಾಜಿ ಅವರ ನೇತೃತ್ವದ ರಜಾಕಾಲೀನ ವಿಭಾಗೀಯ ಪೀಠ ನಡೆಸಿತು.

ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠವು ಪ್ರತಿವಾದಿಗಳಾಗಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ ಕಾರ್ಯದರ್ಶಿ, ಬೆಂಗಳೂರು ಜಿಲ್ಲಾಧಿಕಾರಿ, ಬೆಂಗಳೂರು ಉತ್ತರ ಉಪ ವಲಯದ ಉಪ ವಿಭಾಗಾಧಿಕಾರಿ, ಯಲಹಂಕ ತಹಸೀಲ್ದಾರ್‌, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ ಮತ್ತು ಸ್ಯಾಮಿಸ್‌ ಡ್ರೀಮ್‌ ಲ್ಯಾಂಡ್‌ ಪ್ರೈವೇಟ್‌ ಲಿಮಿಟೆಡ್‌ಗೆ ನೋಟಿಸ್‌ ಜಾರಿ ಮಾಡಿತು.

ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಅರ್ಜಿಯಲ್ಲಿ ದಾಖಲೆಗಳ ಪ್ರಕಾರ ಹೊಸಹಳ್ಳಿ ಗ್ರಾಮದ ಸರ್ವೇ ನಂ 10, 11, 12, 13, 134, 135, 136, 137, 138 ಮತ್ತು 139ರಲ್ಲಿನ ಜಾಗವನ್ನು ರಾಜಕಾಲುವೆ (ಬಿ ಖರಾಜು ಜಮೀನು) ಜಾಗ ಎಂದು ಗುರುತಿಸಲಾಗಿದೆ. ಆ ಜಾಗದ ಮೂಲಕವೇ ಸಾರ್ವಜನಿಕ ಮಾರ್ಗ ಹಾದು ಹೋಗುತ್ತದೆ ಎಂದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಹೇಳಲಾಗಿದೆ. ಆದರೆ, ರಾಜಕಾಲುವೆ ಮತ್ತು ಸಾರ್ವಜನಿಕ ಮಾರ್ಗವಿರುವ ಸಂಗತಿ ಮರೆಮಾಚಿ ಈ ಸರ್ವೇ ನಂಬರ್‌ನಲ್ಲಿನ ಎಲ್ಲಾ ಜಾಗವನ್ನು ಸ್ಯಾಮೀಸ್‌ ಕಂಪೆನಿ ವಿವಿಧ ಹೆಸರುಗಳಲ್ಲಿ ಖರೀದಿ ಮಾಡಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದಿಂದ ಬಡಾವಣೆ ಅಭಿವೃದ್ಧಿಗೆ ಅನುಮೋದನೆ ಪಡೆದುಕೊಂಡಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಮುಂದುವರಿದು, ರಾಜಕಾಲುವೆ ಮತ್ತು ಸಾರ್ವಜನಿಕ ಮಾರ್ಗದ ಜಾಗ ಮುಚ್ಚಿ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಒತ್ತುವರಿ ತೆರವುಗೊಳಿಸಲು ಕೋರಿ ರಾಜ್ಯ ಸರ್ಕಾರಕ್ಕೆ 2024ರ ಏಪ್ರಿಲ್‌ 12 ಹಾಗೂ ಮಾರ್ಚ್‌ 5ರಂದು ಸರ್ಕಾರ ಮತ್ತದರ ಪ್ರಾಧಿಕಾರಗಳಿಗೆ ಮನವಿ ಪತ್ರ ನೀಡಲಾಗಿದೆ. ಮತ್ತೊಂದೆಡೆ ಸರ್ಕಾರ ಈವರೆಗೂ ಒತ್ತುವರಿ ತೆರವಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಲಾಗಿದೆ.

ಅಲ್ಲದೇ, ರಾಜಕಾಲುವೆ ಜಾಗದಲ್ಲಿ ಬಡಾವಣೆ ನಿರ್ಮಾಣಕ್ಕೆ ಅನುಮತಿ ನೀಡಿರುವುದು ಕಾನೂನುಬಾಹಿರ. ರಾಜಕಾಲುವೆ ಜಾಗದಲ್ಲಿ ಅಭಿವೃದ್ಧಿ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎನ್ನಲಾಗಿದೆ. ಆದ್ದರಿಂದ, ರಾಜಕಾಲುವೆ ಮತ್ತು ಸಾರ್ವಜನಿಕ ಮಾರ್ಗ ಜಾಗದಲ್ಲಿ ಬಡಾವಣೆ ಅಭಿವೃದ್ಧಿಪಡಿಸಲು ಸ್ಯಾಮಿಸ್‌ ಕಂಪೆನಿಗೆ ನೀಡಲಾಗಿರುವ ಅನುಮೋದನೆ ರದ್ದುಪಡಿಸಬೇಕು ಮತ್ತು ಕಂಪೆನಿಯಿಂದ ನಡೆದಿರುವ ಒತ್ತುವರಿ ತೆರವುಗೊಳಿಸುವಂತೆ ಸರ್ಕಾರಕ್ಕೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT