ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಟಾಟಾ ಮೋಟಾರ್ಸ್‌ನಿಂದ ನೇಮಕಗೊಂಡಿರುವ ಇ-ಬಸ್ ಚಾಲಕರು ಹಠಾತ್ ಮುಷ್ಕರ ನಡೆಸಿದ ಹಿನ್ನೆಲೆಯಲ್ಲಿ ಮೇ 14 ರಂದು ಬಸ್ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ಹೀಗಾಗಿ ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್(ಜಿಸಿಸಿ) ಮಾದರಿಯಲ್ಲಿ ಖಾಸಗಿ ಬಸ್‌ಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್ ಮತ್ತು ವರ್ಕರ್ಸ್ ಫೆಡರೇಶನ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಪತ್ರ ಬರೆದು ಮನವಿ ಮಾಡಿದೆ.
ಮೇ 16 ರಂದು ಸಚಿವರಿಗೆ ಬರೆದ ಪತ್ರದಲ್ಲಿ ಒಕ್ಕೂಟ, ಸಾರ್ವಜನಿಕ ಸಾರಿಗೆಯಲ್ಲಿ ಹೂಡಿಕೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದೆ. ಸದ್ಯಕ್ಕೆ ಬಿಎಂಟಿಸಿ ಬಸ್ ಚಾಲಕರಿಗೆ ವೇತನ ಬಿಡುಗಡೆ ಮಾಡಿದ ನಂತರವೇ ಖಾಸಗಿ ಸಂಸ್ಥೆಗೆ ಹಣ ನೀಡಬೇಕೆಂದು ಮನವಿ ಮಾಡಿದೆ.
“ಬಿಎಂಟಿಸಿ ಜಿಸಿಸಿ ಆಧಾರದ ಮೇಲೆ 136 ಬಸ್‌ಗಳನ್ನು ತೆಗೆದುಕೊಂಡಿದೆ. ಬಸ್‌ಗಳನ್ನು ನಿರ್ವಹಿಸುತ್ತಿರುವ ಕಂಪನಿಯು ಚಾಲಕರನ್ನು ನೇಮಿಸಿ ಅವರಿಗೆ ಹಣ ಪಾವತಿಸಬೇಕಾಗಿದೆ. ಆದರೆ, ಕಳೆದ ಎರಡು-ಮೂರು ತಿಂಗಳಿಂದ ಚಾಲಕರಿಗೆ ವೇತನ ನೀಡಿಲ್ಲ ಎಂದು ತಿಳಿದುಬಂದಿದೆ.
ಇನ್ನು ವೇತನ ಪಡೆದ ಚಾಲಕರಿಗೆ ಭರವಸೆ ನೀಡಿದ್ದಕ್ಕಿಂತ ಕಡಿಮೆ ಸಂಬಳ ನೀಡಲಾಯಿತು ಎಂದು ಫೆಡರೇಶನ್ ಅಧ್ಯಕ್ಷ ಎಚ್‌ವಿ ಅನಂತಸುಬ್ಬರಾವ್ ಅವರು ಸಾರಿಗೆ ಸಚಿವರಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ.