ಬೆಂಗಳೂರು: ನಗರದಲ್ಲಿ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಕೆಲವೆಡೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ರಾಮಕೃಷ್ಣನಗರದಲ್ಲಿ ಕೇವಲ 10 ನಿಮಿಷ ಮಳೆಯಾದರೆ ಇಡೀ ಪ್ರದೇಶವೇ ಜಲಾವೃತ್ತವಾಗುತ್ತಿದೆ. ಕಳೆದ 12 ವರ್ಷಗಳಿಂದ ಈ ಪ್ರದೇಶದ ಜನರು ಸಂಕಷ್ಟಗಳನ್ನು ಎದುರಿಸುತ್ತಲೇ ಇದ್ದರೂ, ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಹೋರಾಟಗಾರ ಗುಲಾಬ್ ಪಾ ಮಾತನಾಡಿ, ಭಾರೀ ಮಳೆಯ ನಡುವೆಯೂ ಇಲ್ಲಿನ ನಿವಾಸಿಗಳು ತಮ್ಮ ಮನೆಗಳಿಗೆ ನುಗ್ಗುವ ನೀರು ತಡೆಯಲು ಹರಸಾಹಸ ಪಡುತ್ತಿರುತ್ತಾರೆ. ಕೇವಲ 10 ನಿಮಿಷ ಮಳೆ ಬಂದರೂ ಇಲ್ಲಿನ ಇಡೀ ಪ್ರದೇಶ ಜಲಾವೃತವಾಗುತ್ತದೆ. ಕಳೆದ 12 ವರ್ಷಗಳಿಂದ ಇದೇ ರೀತಿಯ ಪರಿಸ್ಥಿತಿ ಎದುರಿಸಲಾಗುತ್ತಿದೆ. 1.5 ಮೀಟರ್ ಉದ್ದದ ರಾಜಕಾಲುವೆ ನಿರ್ಮಾಣ ಕಾರ್ಯ ಬಹಳ ದಿನಗಳಿಂದ ನಡೆಯುತ್ತಲೇ ಇದೆ. ಈ ಕಾಮಗಾರಿಯಿಂದಲೂ ಪ್ರವಾಸ ಪರಿಸ್ಥಿತಿ ಮತ್ತಷ್ಟು ಹೆಚ್ಚಾಗುತ್ತಿದೆ. BBMP ಮತ್ತು BWSSB ಎರಡೂ ಇಲ್ಲಿನ ನಿವಾಸಿಗಳನ್ನು ನಿರ್ಲಕ್ಷಿಸುತ್ತಿದ್ದು, ಮಳೆಗಾಲದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ನಿವಾಸಿ ದೀಪಾ ಎಂಬುವವರು ಮಾತನಾಡಿ, 12 ವರ್ಷಗಳಿಂದ ಒಂದೇ ವಿಷಯದ ಬಗ್ಗೆ ಎಲ್ಲರೂ ಧ್ವನಿ ಎತ್ತುತ್ತಲೇ ಬಂದಿದ್ದೇವೆ. ಇದೀಗ ಮಳೆ ಪ್ರಾರಂಭವಾಗಿದೆ, ಈಗಲಾದರೂ ಪಾಲಿಕೆ ಕ್ರಮ ಕೈಗೊಳ್ಳದಿದ್ದರೆ, ದುರಂತ ಸಂಭವಿಸುವುದು ಖಚಿತ ಎಂದು ಹೇಳಿದ್ದಾರೆ.
ಈ ನಡುವೆ ನೀರು ಕಲುಷಿತವಾಗುವ ಕುರಿತು ಪ್ರಶ್ನೆಗೆ ಉತ್ತರಿಸಿರುವ ಬಿಬಿಎಂಪಿ ಮುಖ್ಯ ಆರೋಗ್ಯ ಅಧಿಕಾರಿ, ಯಾವುದೇ ದೂರುಗಳೂ ಬಂದಿಲ್ಲ. ಈ ಪ್ರದೇಶವನ್ನು ಸಮೀಕ್ಷೆ ಮಾಡಲು ತಂಡವನ್ನು ಕಳುಹಿಸುವ ಭರವಸೆ ನೀಡಿದ್ದಾರೆ.
ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ. ಸಮಸ್ಯೆ ಶಾಶ್ವತ ಪರಿಹಾರಕ್ಕಾಗಿ ಪೈಪ್‌ಲೈನ್‌ಗಳನ್ನು ಸಹ ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.