ರಾಜ್ಯ

ತಮಿಳುನಾಡಿಗೆ ಮತ್ತೆ 2.5 TMC ಕಾವೇರಿ ನೀರು ಹರಿಸಲು ಆದೇಶ; ಹೊರಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿ ಜಾರಿ: CM! ಇಂದಿನ ಸುದ್ದಿ ಮುಖ್ಯಾಂಶಗಳು 21-05-2024

ತಮಿಳುನಾಡಿಗೆ ಮತ್ತೆ 2.5 TMC ಕಾವೇರಿ ನೀರು ಹರಿಸುವಂತೆ ಕರ್ನಾಟಕಕ್ಕೆ CWMA ಆದೇಶ

ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸುವಂತೆ ಕರ್ನಾಟಕಕ್ಕೆ ಇಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಿರ್ದೇಶನ ನೀಡಿದೆ. ಇಂದು ನಡೆದ ಸಭೆಯಲ್ಲಿ ಪ್ರಾಧಿಕಾರ, ಮೇ ತಿಂಗಳ ಭಾಗವಾಗಿ 2.5 ಟಿಎಂಸಿ ಹರಿಸಲು ನಿರ್ದೇಶನ ನೀಡಿದೆ. ಕರ್ನಾಟಕದಲ್ಲಿ ಸಾಕಷ್ಟು ಮಳೆಯಾಗುತ್ತಿದೆ. ಹೀಗಾಗಿ ನೀರು ಹರಿಸುವಂತೆ ಸೂಚಿಸಬೇಕು ಎಂದು CWMA ಸಭೆಯಲ್ಲಿ ತಮಿಳುನಾಡು ವಾದಿಸಿತ್ತು. ಇದಕ್ಕೆ ಪ್ರತಿಯಾಗಿ ಕರ್ನಾಟಕ ಪರ ಅಧಿಕಾರಿಗಳು ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಮುಂಗಾರು ಸಾಮಾನ್ಯವಾಗಿದ್ದರೆ ಮಾತ್ರ ನೀರು ಬಿಡಬಹುದು. ಇಲ್ಲದಿದ್ದರೆ ನೀರು ಬಿಡುವುದಕ್ಕೆ ಸಾಧ್ಯವೆ ಇಲ್ಲ ಎಂದು ಸಭೆಯಲ್ಲಿ ವಾದ ಮಂಡಿಸಿದ್ದರು.

ಹೊರಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿ ಜಾರಿ: ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹೊರಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿ ಜಾರಿ ಮಾಡಿ ಆದೇಶ ಹೊರಡಿಸಿದ್ದು, ಡಾಟಾ ಎಂಟ್ರಿ ಆಪರೇಟರ್‌, ವಾಹನ ಚಾಲಕರು, ಗ್ರೂಪ್‌ -ಡಿ ಹಾಗೂ ಸ್ವಚ್ಛತಾ ಸಿಬ್ಬಂದಿ ಒಳಗೊಂಡು ಎಲ್ಲ ಇಲಾಖೆಗಳ ಹೊರಗುತ್ತಿಗೆ ನೇಮಕಾತಿಯಲ್ಲಿ ಇನ್ನು ಮುಂದೆ ಮೀಸಲು ನಿಯಮ ಪಾಲನೆ ಕಡ್ಡಾಯವಾಗಿದೆ. ಕಳೆದ ಡಿಸೆಂಬರ್ 21ರಂದು ಸಚಿವ ಸಂಪುಟ ಸಭೆ ಕೈಗೊಂಡಿದ್ದ ನಿರ್ಣಯ ಆಧರಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ನಿನ್ನೆ ಈ ಸಂಬಂಧ ಸುತ್ತೋಲೆ ಹೊರಡಿಸಿತ್ತು. ಹೊರಗುತ್ತಿಗೆ ನೌಕರರ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.33 ಮೀಸಲು ಕಡ್ಡಾಯವಾಗಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದೂಳಿದ ವರ್ಗಗಳಿಗೆ ಎಲ್ಲಇಲಾಖೆಗಳು, ಸ್ವಾಯತ್ತ ಸಂಸ್ಥೆ, ನಿಗಮ, ಮಂಡಳಿ, ವಿಶ್ವವಿದ್ಯಾಲಯಗಳಿಗೂ ಇದು ಅನ್ವಯವಾಗಲಿದೆ. ಹೊರಗುತ್ತಿಗೆ ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯ ಪಾಲನೆಗೆ ಅವಕಾಶ ಕಲ್ಪಿಸುವ ಐತಿಹಾಸಿಕ ಹೆಜ್ಜೆಯಿರಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದತಿಗೆ ಪತ್ರ

ಅಶ್ಲೀಲ ವಿಡಿಯೋಗಳು ವೈರಲ್ ಆದ ಬಳಿಕ ವಿದೇಶಕ್ಕೆ ಪರಾರಿಯಾಗಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಬಂಧನಕ್ಕೆ ಈಗಾಗಲೆ ವಾರಂಟ್ ಜಾರಿ ಮಾಡಲಾಗಿದೆ. ಅದರ ಆಧಾರದ ಮೇಲೆ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದು ಮಾಡುವಂತೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಪಾಸ್ಪೋರ್ಟ್ ರದ್ದಾದರೆ ಪ್ರಜ್ವಲ್ ಭಾರತಕ್ಕೆ ಬರಬೇಕಾಗುತ್ತದೆ ಎಂದರು. ಪ್ರಕರಣ ಸಂಬಂಧ ಎಸ್ಐಟಿ ಮುಂದೆ ಶರಣಾಗುವಂತೆ ಪ್ರಜ್ವಲ್ ರೇವಣ್ಣಗೆ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಮನವಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ ಅವರು, ಇದು ಅವರ ಕುಟುಂಬದ ಆಂತರಿಕ ವಿಚಾರ ಎಂದು ಹೇಳಿದರು.

ಪ್ರಿಯಾ ಎಕ್ಸ್‌ಪೋರ್ಟ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ: ಮಹಿಳೆ ಸಾವು

ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಸಹ-ಮಾಲಿಕತ್ವದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕಟ್ಟಿ ಗ್ರಾಮದ ಹೊರ ವಲಯದ ಪ್ರಿಯಾ ಎಕ್ಸ್‌ಪೋರ್ಟ್ ಕಾರ್ಖಾನೆಯಲ್ಲಿ ಸಂಭವಿಸಿದ ಬಾಯ್ಲರ್ ಸ್ಫೋಟದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು ಹಲವರಿಗೆ ಗಂಭೀರ ಗಾಯವಾಗಿದೆ. ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶೋಭಾ ತೇಲಿ ಮೃತಪಟ್ಟಿದ್ದರೆ ಮತ್ತಿಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಂದೆಡೆ ಮೈಸೂರಿನಲ್ಲಿ ಕಲುಶಿತ ನೀರು ಸೇವಿಸಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು 48 ಮಂದಿ ಅಸ್ವಸ್ಥರಾಗಿದ್ದಾರೆ. ಮೈಸೂರಿನ ಸಾಲುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಸ್ವಸ್ಥರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಸಿದ್ದರಾಮಯ್ಯ, ಈ ಬಗ್ಗೆ ತನಿಖೆ ನಡೆಸಿ, ಅಸ್ವಸ್ಥರಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸಿನಿಮಾ ನಟಿ ಹಾಗೂ ಕಾಂಗ್ರೆಸ್ ನಾಯಕಿ ವಿದ್ಯಾ ಬರ್ಬರ ಹತ್ಯೆ

ಮೈಸೂರು ಜಿಲ್ಲೆ ಬನ್ನೂರಿನ ತುರಗನೂರಿನಲ್ಲಿ ಪತ್ನಿಯನ್ನು ಪತಿಯೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಸಿನಿಮಾ ನಟಿ ಹಾಗೂ ಕಾಂಗ್ರೆಸ್ ನಾಯಕಿ ವಿದ್ಯಾಳನ್ನು ಆಕೆಯ ಪತಿ ನಂದೀಶ್ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಬೆಳಗಾವಿಯಲ್ಲಿ ಸಾಲ ತೀರಿಸಿದ್ದಕ್ಕೆ ಪತ್ನಿ ಮತ್ತು ಪುತ್ರನನ್ನು ಗೃಹ ಬಂಧನದಲ್ಲಿಟ್ಟಿದ್ದಕ್ಕೆ ಮನನೊಂದು ರೈತ ರಾಜು ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮತ್ತೊಂದೆಡೆ, ಧಾರವಾಡದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್ ಮಹೇಶ ಹೆಸರೂರು ಎಂಬುವರು ವಿಜಯಲಕ್ಷ್ಮೀ ವಾಲಿ ಎಂಬುವರೊಂದಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಾಮನಗಟ್ಟಿಯಲ್ಲಿ ನಡೆದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT