ಉಡುಪಿ: ಉಡುಪಿ-ಮಣಿಪಾಲ ರಸ್ತೆಯ ನಡುರಸ್ತೆಯಲ್ಲೇ ನಡೆದ ಗ್ಯಾಂಗ್ ವಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಉಡುಪಿ ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.
ಮೇ 18ರಂದು ಈ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದರ ಆಧಾರದ ಮೇಲೆ ಪೊಲೀಸರು ಮೇ 20ರಂದು ಪ್ರಕರಣ ದಾಖಲಿಸಿಕೊಂಡಿದ್ದರು.
ಅದರಂತೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಕಾಪುವಿನ ಗರುಡ ಗ್ಯಾಂಗಿನ ಆಶಿಕ್ ಮತ್ತು ರಕೀಬ್ ಎಂದು ಗುರ್ತಿಸಲಾಗಿದೆ. ಈ ಗ್ಯಾಂಗ್ ನಲ್ಲಿದ್ದ ಉಳಿದವರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೃತ್ಯಕ್ಕೆ ಬಳಸಿದ ಎರಡು ಸ್ವಿಫ್ಟ್ ಕಾರುಗಳು ಮತ್ತು ಎರಡು ಬೈಕ್‌ಗಳು, ಒಂದು ತಲ್ವಾರ್ ಮತ್ತು ಒಂದು ಡ್ರ್ಯಾಗರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಘರ್ಷಣೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ, ಪ್ರಾಥಮಿಕ ವರದಿಗಳ ಪ್ರಕಾರ ಈ ಗ್ಯಾಂಗ್ ಈಗ ಹೆಚ್ಚು ಸಕ್ರಿಯವಾಗಿಲ್ಲ. ಗ್ಯಾಂಗ್‌ನಲ್ಲಿ ಆಂತರಿಕ ಕಲಹವಿದ್ದು, ಅಸೂಯೆಯೇ ತಂಡದ ಘರ್ಷಣೆಗೆ ಕಾರಣ ಎಂದು ತಿಳಿದುಬಂದಿದೆ ಎಂದು ಎಸ್‌ಪಿ ಅರುಣ್ ಅವರು ಹೇಳಿದ್ದಾರೆ.
ಈ ಮಧ್ಯೆ, ಬ್ರಹ್ಮಾವರದ ಬಾರ್ಕೂರಿನ 19 ವರ್ಷದ ಯುವಕನೊಬ್ಬ ದೂರು ದಾಖಲಿಸಿದ್ದು, ಮೇ 13 ಮತ್ತು ಮೇ 17 ರ ನಡುವೆ ಧನುಷ್ ಎಂಬಾತ ಮಾರಾಟ ಮಾಡುವಂತೆ ಕಾರೊಂದನ್ನು ನನಗೆ ನೀಡಿದ್ದ. ಈ ವೇಳೆ ಪರಿಚಿತರಾದ ಮಹಮ್ಮದ್ ಫಾಜಿಲ್ ಎಂಬಾತ ವಾಹನವನ್ನು ಟೆಸ್ಟ್ ಡ್ರೈವ್ ಮಾಡಲು ತೆಗೆದುಕೊಂಡು ಹೋಗಿ ಇಸಾಕ್ ಮತ್ತು ಇತರರಿಗೆ ಹಸ್ತಾಂತರಿಸಿದ್ದು, ಕಾರಿಗೆ ಹಾನಿ ಮಾಡಿ 2 ಲಕ್ಷ ರೂ ನಷ್ಟವಾಗುವಂತೆ ಮಾಡಿದ್ದಾರೆ. ದರೋಡೆ ಮಾಡಿರುವ ಸಾಧ್ಯತೆಗಳಿದ್ದು, ಕಾರಿನಲ್ಲಿ ಕತ್ತಿ ಇರಿಸಿದ್ದಾರೆ ಎಂಬ ಆರೋಪಿದ್ದಾರೆ.