ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಕೆಕೆಆರ್‌ಟಿಸಿ) ಬಸ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಮೇಲೆ ತೆರಳುತ್ತಿದ್ದ ಅಪ್ರಾಪ್ತ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಮೃತರೆಲ್ಲರೂ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಮೃತರನ್ನು ಕಿಣ್ಣಿ ಸಡಕ್ ಗ್ರಾಮದ 17 ವರ್ಷದ ಚಂದ್ರಕಾಂತ ನಿಂಗಪ್ಪ ಹೊಳಕುಂದಿ, 20 ವರ್ಷದ ವಿಶಾಲ್ ಸಂಜಯಕುಮಾರ್ ಮತ್ತು 23 ವರ್ಷದ ಸಮೀರ್ ಸಾಬ್ ಎಂದು ಗುರುತಿಸಲಾಗಿದೆ.
ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಡೊಂಗರಗಾಂವ ಕ್ರಾಸ್ ಬಳಿಯ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ.
ತಮ್ಮ ಗ್ರಾಮದಿಂದ ಕಲಬುರಗಿ ನಗರಕ್ಕೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಬಸ್ ಕಲಬುರಗಿಯಿಂದ ಹುಮನಾಬಾದ್ ಪಟ್ಟಣದ ಕಡೆಗೆ ತೆರಳುತ್ತಿದ್ದ ವಿಜಯಪುರ-ಬಸವಕಲ್ಯಾಣ ಬಸ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಿಂದ ತೀವ್ರವಾಗಿ ಗಾಯಗೊಂಡ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.