ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಅತಿದೊಡ್ಡ ಸಗಟು ಮಾರುಕಟ್ಟೆಗಳಲ್ಲಿ ಒಂದಾದ ಚಿಕ್ಕಪೇಟೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿಗೆ ನೀಡಲಾಗಿದ್ದ 100 ದಿನಗಳ ಗುಡುವು ಪೂರ್ಣಗೊಂಡಿದ್ದರೂ, ಕಾಮಗಾರಿ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ. ಮುಂದುವರೆದ ಕಾಮಗಾರಿಯಿಂದಾಗಿ ಮಾರುಕಟ್ಟೆ ಅಸ್ತವ್ಯಸ್ತಗೊಂಡಿದ್ದು, ನಷ್ಟದಿಂದಾಗಿ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಗಾಂಧಿನಗರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಈ ಮಾರುಕಟ್ಟೆಯು ನೂರಾರು ಬಟ್ಟೆ ಅಂಗಡಿಗಳು, ಹೋಟೆಲ್, ಸಾಮಾನುಗಳ ಅಂಗಡಿಗಳು, ಎಲೆಕ್ಟ್ರಾನಿಕ್ಸ್ ಮಳಿಗೆಗಳು ಹಾಗೂ ಹಲವಾರು ಸಣ್ಣ ತಿನಿಸುಗಳಿಗೆ ನೆಲೆಯಾಗಿದೆ. ಪ್ರತಿನಿತ್ಯ ಸಾವಿರಾರು ಜನರು ಈ ಪ್ರದೇಶಕ್ಕೆ ಭೇಟಿ ನೀಡುತ್ತಾರೆ. ಆದರೀಗ, ಜನರು ಈ ರಸ್ತೆಯಲ್ಲಿ ನಡೆದುಕೊಂಡು ಹೋಗಲು ಸಹ ಹೆಣಗಾಡುವಂತಾಗಿದೆ.
ಮೇ ತಿಂಗಳಲ್ಲಿ ಈ ರಸ್ತೆಗಳಲ್ಲಿ ವೈಟ್-ಟಾಪಿಂಗ್ ಯೋಜನೆ ಪ್ರಾರಂಭವಾಗಿತ್ತು. ಆದರೆ, ಗಡುವು ಪೂರ್ಣಗೊಂಡಿದ್ದರೂ ಕಾಮಗಾರಿ ಇನ್ನೂ ಆಮೆಗತಿಯಲ್ಲಿ ಸಾಗಿದೆ. ವರಮಹಾಲಕ್ಷ್ಮಿ, ಗಣೇಶ ಹಬ್ಬದ ಬಳಿಕ ಇದೀಗ ದಸರಾ ಹಬ್ಬ ಸಮೀಪಿಸುತ್ತಿದ್ದು, ಈ ಹಬ್ಬಕ್ಕಾದರೂ ಲಾಭ ಗಳಿಕೆಯ ನಿರೀಕ್ಷೆಯಲ್ಲಿದ್ದ ವ್ಯಾಪಾರಸ್ಥರಿಗೆ ಬಿಬಿಎಂಪಿ ಕಾಮಗಾರಿಯು ಹೊಡೆತ ನೀಡುತ್ತಿದೆ.
ಕಾಮಗಾರಿಯಿಂದಾಗಿ ಅಗೆದಿರುವ ರಸ್ತೆಗಳಲ್ಲಿ ಸಂಚರಿಸಲು ಮಾರಾಟಗಾರರು ಮತ್ತು ಗ್ರಾಹಕರು ಇಬ್ಬರೂ ಹೆಣಗಾಡುವಂತಾಗಿದೆ. ಇದರಿಂದ ಬಿವಿಕೆ ಅಯ್ಯಂಗಾರ್ ರಸ್ತೆ ಮತ್ತು ಮಾಮುಲ್‌ಪೇಟೆ- ಚಿಕ್ಕಪೇಟೆ ಮೆಟ್ರೋ ನಿಲ್ದಾಣದವರೆಗಿನ ವ್ಯಾಪಾರಸ್ಥರ ಆದಾಯದಲ್ಲಿ ಶೇ.30-40ರಷ್ಟು ಕುಸಿತವಾಗಿದೆ ಎಂದು ತಿಳಿದುಬಂದಿದೆ.
ನಾಗರೀಕ ಸಂಸ್ಥೆಗಳ ನಡುವಿನ ಸಮನ್ವಯ ಕೊರತೆಯೇ ಕಾಮಗಾರಿ ವಿಳಂಬಕ್ಕೆ ಕಾರಣ ಎಂದು ಬಿಬಿಎಂಪಿ ಇಂಜಿನಿಯರ್‌ಯೊಬ್ಬರು ಹೇಳಿದ್ದಾರೆ.
ಇಲ್ಲಿನ ವ್ಯಾಪಾರಸ್ಥರಾಗಿರುವ ಶಂಕರ್ ಎಂಬುವವರು ಮಾತನಾಡಿ, ಈ ಪ್ರದೇಶದ ಅನೇಕ ಅಂಗಡಿ ಮಾಲೀಕರು ಸರಕುಗಳನ್ನು ಸಾಗಿಸಲು ಕೂಲಿಗಳಿಗೆ ಹೆಚ್ಚುವರಿ ಶುಲ್ಕವನ್ನು ಪಾವತಿಸುವಂತಾಗಿದೆ, ಏಕೆಂದರೆ, ನಿರ್ಮಾಣ ಕಾರ್ಯದಿಂದಾಗಿ ಲಾರಿಗಳು ಅಂಗಡಿ ಮುಂಗಟ್ಟುಗಳ ಬಳಿ ಬರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೂಲಿಗಳ ಮೇಲೆ ಅವಲಂಬಿತವಾಗುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬ ವ್ಯಾಪಾರಿ ಪ್ರಕಾಶ್ ಎಂಬುವವರು ಮಾತನಾಡಿ, ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರು ಇದೀಗ ಬೇರೆ ಬೇರೆ ಸ್ಥಳಗಳಲ್ಲಿ ಸರಕುಗಳನ್ನು ಖರೀದಿಸಲು ಆರಂಭಿಸಿದ್ದಾರೆ. ಇದು ಅನಾನುಕೂಲಕ್ಕೆ ಕಾರಣವಾಗಿದೆ. ಜನರು ಬೇರೆ ಅಂಗಡಿಗಳ ಕಡೆಗೆ ಆಕರ್ಷಿತರಾದರೆ ಮತ್ತೆ ಅವರನ್ನು ನಮ್ಮ ಬಳಿ ಬರುವಂತೆ ಮಾಡುವುದು ಕಷ್ಟ ಎಂದು ಹೇಳಿದ್ದಾರೆ.
ವ್ಯಾಪಾರ ಕಾರ್ಯಕರ್ತ ಸಜ್ಜನ್ ರಾಜ್ ಮೆಹ್ತಾ ಮಾತನಾಡಿ, ಇಂತಹ ಜನನಿಬಿಡದ ಪ್ರದೇಶಗಳಲ್ಲಿ ಕೆಲಸ ಮಾಡುವಾಗ ಅಧಿಕಾರಿಗಳ ಸಂಪರ್ಕ ಸಂಖ್ಯೆ ಹಾಗೂ ಕೆಲಸ ಮುಗಿಯುವ ಸಮಯ ಜೊತೆಗೆ ಅಧಿಕಾರಿಗಳ ಹೆಸರುಗಳನ್ನು ಪ್ರದರ್ಶನ ಮಾಡುವ ಬೋರ್ಡ್ ಹಾಕಬೇಕು. ನೀಡಿದ ಗಡುವಿನಲ್ಲಿ ಕೆಲಸ ಮುಗಿಸದವರ ಮೇಲೆ ದಂಡ ಹೇರಬೇಕು ಎಂದು ಹೇಳಿದ್ದಾರೆ.
ಬಿಡಬ್ಲೂಎಸ್‌ಎಸ್‌ಬಿ, ಬಿಬಿಎಂಪಿ ಸೇರಿದಂತೆ ಇತರ ಇಲಾಖೆಗಳ ನಡುವಿನ ಸಮನ್ವಯ ಕೊರತೆಯಿಂದ ನಗರದಲ್ಲಿ ನಡೆಯುವ ದೈನಂದಿನ ಕಾರ್ಯಾಚರಣೆಗಳ ಮೇಲೆ ಇದು ನೇರವಾಗಿ ಪರಿಣಾಮ ಬೀರುತ್ತಿದೆ. ಕಾಮಗಾರಿಯಿಂದಾಗಿ ತಮ್ಮ ಜೀವನೋಪಾಯಕ್ಕಾಗಿ ಈ ಸ್ಥಳವನ್ನು ಅವಲಂಬಿಸಿರುವವರ ಜೀವನ ಮತ್ತಷ್ಟು ಕಷ್ಟಕರವಾಗುತ್ತಿದೆ. ಅಭಿವೃದ್ಧಿ ಕಾರ್ಯಗಳು ಸಮಯ ತೆಗೆದುಕೊಳ್ಳುತ್ತದೆ ಎಂಬುದು ನಮಗೆ ಅರ್ಥವಾಗುತ್ತದೆ. ಆದರೆ, ಯಾವಾಗ ಕೊನೆಗೊಳ್ಳುತ್ತದೆ ಎಂಬುದರ ಕುರಿತು ಯಾರೂ ನಮಗೆ ಸ್ಪಷ್ಟ ಉತ್ತರಗಳನ್ನು ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.