ಬೆಂಗಳೂರು: ಬರ್ತ್ ಡೇ ಪಾರ್ಟಿಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಆರೋಪದ ಮೇರೆಗೆ ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
59 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ಸೈಯದ್ ಅಲ್ತಾಫ್ ಅಹ್ಮದ್ ಎಂಬಾತನನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದು, ಕಳೆದ ಸೆಪ್ಟೆಂಬರ್ 22 ರಂದು ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ ಉದ್ಯಮಿ ಸೈಯದ್ ಅಲ್ತಾಫ್ ಅಹ್ಮದ್ ಗಾಳಿಯಲ್ಲಿ ಆರು ಸುತ್ತು ಗುಂಡು ಹಾರಿಸಿದ್ದರು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಬನ್ನೇರುಘಟ್ಟ ರಸ್ತೆಯಲ್ಲಿರುವ ಸ್ಕ್ರ್ಯಾಪ್ ಗೋಡೌನ್‌ನಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಸೈಯದ್ ಅಲ್ತಾಫ್ ಅಹ್ಮದ್ ಇತರ 200 ಸದಸ್ಯರೊಂದಿಗೆ ಮೊಯಿನ್ ಖಾನ್ ಅವರ ಹುಟ್ಟುಹಬ್ಬದ ಸಂತೋಷಕೂಟದಲ್ಲಿ ಭಾಗಿಯಾಗಿದ್ದರು. ಆಚರಣೆಯ ಸಂದರ್ಭದಲ್ಲಿ, ಅಹ್ಮದ್ ತನ್ನ ಪರವಾನಗಿ ಪಡೆದ ಪಿಸ್ತೂಲ್‌ನಿಂದ ಅಜಾಗರೂಕವಾಗಿ ಗಾಳಿಯಲ್ಲಿ ಮನಸೋ ಇಚ್ಛೆ ಗುಂಡು ಹಾರಿಸಿದ್ದರು.
ಇದನ್ನು ಅದೇ ಕಾರ್ಯಕ್ರಮದಲ್ಲಿ ಇದ್ದವರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ವ್ಯಾಪಕ ವೈರಲ್ ಆಗಿತ್ತು. ಇದೇ ವಿಡಿಯೋ ಆಧಾರದ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಬೆಂಗಳೂರು ಸಿಸಿಬಿ ಪೊಲೀಸರು ಉಧ್ಯಮಿ ಸೈಯದ್ ಅಲ್ತಾಫ್ ಅಹ್ಮದ್ ನನ್ನು ಬಂಧಿಸಿದ್ದಾರೆ.
ಸಿಸಿಬಿ ಕ್ರಮ
ಈ ವಿಡಿಯೋಗೆ ಬೆಂಗಳೂರು ಪೊಲೀಸ್‌ನ ಸಾಮಾಜಿಕ ಮಾಧ್ಯಮ ವಿಭಾಗವು ಪ್ರತಿಕ್ರಿಯೆ ನೀಡಿದ್ದು ಮಾತ್ರವಲ್ಲದೇ ತಕ್ಷಣವೇ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಉಪ ಪೊಲೀಸ್ ಆಯುಕ್ತ ಶ್ರೀನಿವಾಸ್ ಗೌಡ ಅವರಿಗೆ ಮಾಹಿತಿ ನೀಡಿದೆ. ಪ್ರತಿಕ್ರಿಯೆಯಾಗಿ, ಸಿಸಿಬಿ ಪೊಲೀಸರು ವೀಡಿಯೊವನ್ನು ಪೋಸ್ಟ್ ಮಾಡಿದ ಖಾತೆದಾರರಾದ ಅಹ್ಮದ್ ಮತ್ತು ಜುಬೇರ್ ಖಾನ್ ಲಿಮ್ರಾ ಸೇರಿದಂತೆ ಒಳಗೊಂಡಿರುವ ವ್ಯಕ್ತಿಗಳನ್ನು ತ್ವರಿತವಾಗಿ ಗುರುತಿಸಿ ವಿಚಾರಣೆಗೊಳಪಡಿಸಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಕಾನೂನುಬಾಹಿರವಾಗಿ ಶಸ್ತ್ರಾಸ್ತ್ರ ಪ್ರದರ್ಶನ ಮತ್ತು ಬಳಕೆ ಮಾಡಿದ್ದಕ್ಕಾಗಿ ಅಲ್ತಾಫ್ ಅವರನ್ನು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25 (9) ಅಡಿಯಲ್ಲಿ ಬಂಧಿಸಲಾಗಿದೆ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಪ್ರಕರಣವನ್ನು 1ನೇ ಎಸಿಜೆಎಂ ನ್ಯಾಯಾಲಯಕ್ಕೆ ರವಾನಿಸಲಾಗಿದೆ.