ಬೆಂಗಳೂರು: ಓಲಾ ಕ್ಯಾಬ್‌ನಲ್ಲಿ ಪ್ರಯಾಣಿಸುವ ವೇಳೆ ಚಾಲಕನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಯುವತಿಗೆ 5 ಲಕ್ಷ ರೂ. ಪಾವತಿಸಲು ಆದೇಶಿಸಿದ್ದ ಏಕ ಸದಸ್ಯ ಪೀಠದ ಆದೇಶಕ್ಕೆ ಹೈಕೋರ್ಟ್ ಶುಕ್ರವಾರ ತಡೆ ನೀಡಿದೆ.
ಎಎನ್‌ಐ ಟೆಕ್ನಾಲಜೀಸ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಸ್ಆರ್ ಕೃಷ್ಣ ಕುಮಾರ್ ಮತ್ತು ಎಂ.ಜಿ. ಉಮಾ ಅವರಿದ್ದ ರಜಾಕಾಲದ ವಿಭಾಗೀಯ ಪೀಠ ನಡೆಸಿತು.
ವಿಚಾರಣೆ ವೇಳೆ ಮೇಲ್ಮನವಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲರು, ಇದು 5 ಲಕ್ಷ ಪರಿಹಾರ ಪಾವತಿಸುವ ವಿಚಾರವಲ್ಲ. ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ನಿಷೇಧ, ತಡೆ ಮತ್ತು ಪರಿಹಾರ) ಕಾಯಿದೆ 2013ರ ವ್ಯಾಖ್ಯಾನಕ್ಕೆ ಸಂಬಂಧಿಸಿದ ವಿಚಾರವಾಗಿದೆ. ನಾವು ಚಾಲಕರಿಗೆ ಉದ್ಯೋಗ ನೀಡಿಲ್ಲ. ಓಲಾ ಸೇವೆಯನ್ನು ಚಾಲಕರು ಬಳಸಿಕೊಳ್ಳುತ್ತಾರೆ. ಚಾಲಕರು ಸ್ವತಂತ್ರ ಗುತ್ತಿಗೆದಾರರಾಗಿದ್ದಾರೆ ಎಂದು ಹೇಳಿದರು.
ಇದನ್ನು ಸೂಕ್ಷ್ಮವಾಗಿ ಗಮಿಸಿದ ನ್ಯಾಯಪೀಠ, ಪ್ರಕರಣದ ವಿಚಾರಣೆ ಅಗತ್ಯವಿದೆ. ಹೀಗಾಗಿ, ಸದ್ಯಕ್ಕೆ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿ, ಪ್ರತಿವಾದಿಗಳಿಗೆ ತುರ್ತು ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಅಕ್ಟೋಬರ್ 28ಕ್ಕೆ ಮುಂದೂಡಿತು.
2019ರಲ್ಲಿ ಓಲಾ ಕ್ಯಾಬ್‌ನಲ್ಲಿ ಪ್ರಯಾಣಿಸುವಾಗ ಚಾಲಕನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದು, ಚಾಲಕನ ವಿರುದ್ಧ ಕ್ರಮ ಜರುಗಿಸುವಂತೆ ಕೋರಿ ಕೋರಿ ಸಂತ್ರಸ್ತೆಯು ಎಎನ್‌ಐ ಟೆಕ್ನಾಲಜೀಸ್ಗೆ ದೂರು ನೀಡಿದ್ದರು.
ಆಂತರಿಕ ದೂರುಗಳ ಸಮಿತಿಯು ತಮ್ಮ ದೂರನ್ನು ಪರಿಗಣಿಸಿ ಅದರ ಬಗ್ಗೆ ವಿಚಾರಣೆ ನಡೆಸುವ ಅಧಿಕಾರ ಹೊಂದಿಲ್ಲ ಎಂದು ಕಂಪನಿ ಸಂತ್ರಸ್ತೆಗೆ ತಿಳಿಸಿತ್ತು. ಇದನ್ನು ಪ್ರಶ್ನಿಸಿ ಸಂತ್ರಸ್ತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ಏಕಸದಸ್ಯ ಪೀಠ ಪುರಸ್ಕರಿಸಿತ್ತು.
ಪ್ರಕರಣದ ಸಂಬಂಧ ಸೆಪ್ಟೆಂಬರ್ 30ರಂದು ವಿಚಾರಣೆ ನಡೆಸಿದ ಏಕಸದಸ್ಯ ಪೀಠವು, 5 ಲಕ್ಷ ಪರಿಹಾರ ಹಣವಲ್ಲದೇ ಸಂತ್ರಸ್ತೆಗೆ ವ್ಯಾಜ್ಯ ವೆಚ್ಚವಾಗಿ ಹೆಚ್ಚುವರಿ 50 ಸಾವಿರ ಮೊತ್ತವನ್ನು ಕಂಪನಿ ಪಾವತಿಸಬೇಕು. ಅಲ್ಲದೇ ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರದ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿಯವರು ವೈಯಕ್ತಿಕವಾಗಿ 1 ಲಕ್ಷ ಹಣವನ್ನು ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸಬೇಕು. ಸಂತ್ರಸ್ತೆ ನೀಡಿದ ದೂರಿನ ಕುರಿತು ಕಂಪನಿಯ ಆಂತರಿಕ ದೂರುಗಳ ಸಮಿತಿ ವಿಚಾರಣೆ ನಡೆಸಬೇಕು. ಆ ವಿಚಾರಣಾ ಪ್ರಕ್ರಿಯೆಯನ್ನು 90 ದಿನಗಳಲ್ಲಿ ಪೂರ್ಣಗೊಳಿಸಬೇಕು. ಬೆಂಗಳೂರು ನಗರ ಜಿಲ್ಲಾಧಿಕಾರಿ ಸಮಿತಿಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಆದೇಶಿಸಿತ್ತು.