ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಯೊಂದು ಏಕಾಏಕಿ ಸಫಾರಿ ಬಸ್ ಏರಿದ್ದು, ಕೆಲವು ಪ್ರವಾಸಗರು ಆತಂಕಗೊಂಡಿದ್ದು, ಇನ್ನು ಕೆಲವರು ಕಿಟಕಿಯಲ್ಲಿ ಚಿರತೆ ನೋಡಿ ಖುಷಿಪಟ್ಟಿದ್ದಾರೆ.
ಈ ರೋಮಾಂಚಕ ಕ್ಷಣದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಿರತೆ ಬಸ್ ಹತ್ತಲು ಪ್ರಯತ್ನಿಸಿದೆ ಮತ್ತು ಗಾಬರಿಗೊಂಡ ಪ್ರಯಾಣಿಕರನ್ನು ವಾಹನದ ಕಿಟಕಿಯ ಮೂಲಕ ಇಣುಕಿ ನೋಡಿದೆ. ನಂತರ ಚಾಲಕ ಬಸ್ ಅನ್ನು ನಿಧಾನವಾಗಿ ಮುಂದಕ್ಕೆ ಚಲಿಸಲು ಪ್ರಾರಂಭಿಸುತ್ತಿದ್ದಂತೆ ಕೆಳಕ್ಕೆ ಹಾರಿ ಹೋಗಿದೆ.
ಅಧಿಕಾರಿಗಳ ಪ್ರಕಾರ, ಭಾನುವಾರ ಸಫಾರಿ ವೇಳೆ ಚಾಲಕ ವನ್ಯಜೀವಿಗಳನ್ನು ಹತ್ತಿರದಿಂದ ವೀಕ್ಷಿಸಲು ಕರೆದುಕೊಂಡು ಹೋದಾಗ ಈ ಘಟನೆ ನಡೆದಿದೆ. ಈ ದೃಶ್ಯವನ್ನು ಪ್ರವಾಸಿಗರು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
"ಪ್ರವಾಸಿಗರು ಆರಂಭದಲ್ಲಿ ಆಘಾತಕ್ಕೊಳಗಾದರು ಮತ್ತು ಭಯಭೀತರಾದರು. ಆದರೆ ಸ್ವಲ್ಪ ಸಮಯದ ನಂತರ ಅವರು ನಿರಾಳರಾದರು ಮತ್ತು ಈ ಅಪರೂಪದ ದೃಶ್ಯವನ್ನು ಆನಂದಿಸಿದರು.
ಎಲ್ಲಾ ಸಫಾರಿ ವಾಹನಗಳು ಜಾಲರಿ ಹೊಂದಿದ್ದು, ಪ್ರವಾಸಿಗರು ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.