ಬೆಂಗಳೂರು: ಶನಿವಾರ ರಾತ್ರಿಯಿಂದ ಭಾನುವಾರ ಬೆಳಗ್ಗೆವರೆಗೆ ನಗರದ ಹಲವೆಡೆ ಸುರಿದ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಮನೆಗಳು ಮತ್ತು ವಸತಿ ಸಂಕೀರ್ಣಗಳು ಜಲಾವೃತಗೊಂಡಿವೆ, ಕಾಂಪೌಂಡ್ ಗೋಡೆ ಕುಸಿದು ಅನೇಕ ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ.
ಸುಮಾರು 15 ಮರಗಳು ನೆಲಕ್ಕುರುಳಿವೆ, 44 ಕೊಂಬೆಗಳು ಮುರಿದು ಬಿದ್ದಿವೆ, ಅನೇಕ ರಸ್ತೆಗಳು ನದಿಗಳಾಗಿ ಮಾರ್ಪಟ್ಟಿವೆ, ಶನಿವಾರ ರಾತ್ರಿ ನಗರದಲ್ಲಿ ಭಾರೀ ಮಳೆ ಸುರಿದ ನಂತರ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಯಲಹಂಕದ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್‌ನ ಸಾವಿರಾರು ನಿವಾಸಿಗಳು ಮೊಣಕಾಲು ಆಳದ ನೀರಿನಿಂದ ಪರದಾಡಿದರು. “ಪ್ರವಾಹದಿಂದಾಗಿ ವಿದ್ಯುತ್ ಮತ್ತು ನೀರು ಸರಬರಾಜು ಇಲ್ಲ. ಹಲವು ಕಾರುಗಳು ಮತ್ತು ವಾಹನಗಳು ನೀರಿನಲ್ಲಿ ಮುಳುಗಿವೆ. ಪರಿಸ್ಥಿತಿ ಸುಧಾರಿಸುವವರೆಗೆ ನಾವು ಪರಸ್ಪರ ಸಹಾಯ ಮಾಡುತ್ತೇವೆ ಎಂದು ಅಪಾರ್ಟ್‌ಮೆಂಟ್‌ನ ನಿವಾಸಿ ಪ್ರೀತಿಎಂಬುವರು ನಿವಾಸಿಗಳಿಗೆ ಆಹಾರದ ಪ್ಯಾಕೆಟ್ ತೆಗೆದುಕೊಂಡು ಹೋಗಿ ವಿತರಿಸಿದರು ಸ್ವಯಂಸೇವಕರು ಟ್ರ್ಯಾಕ್ಟರ್‌ನಲ್ಲಿ ಹಾಲಿನ ಪ್ಯಾಕೆಟ್‌ಗಳು, ನೀರಿನ ಬಾಟಲಿಗಳು ಮತ್ತು ಬ್ರೆಡ್ ಪ್ಯಾಕೆಟ್‌ಗಳನ್ನು ತುಂಬಿ ನಿವಾಸಿಗಳಿಗೆ ವಿತರಿಸಿದರು. ಅಪಾರ್ಟ್‌ಮೆಂಟ್ ಮತ್ತು ಯಲಹಂಕ ಕೆರೆಯ ನಡುವಿನ 50 ಅಡಿ ಕಾಂಪೌಂಡ್ ಗೋಡೆ ಕುಸಿದಿದ್ದರಿಂದ ಅಪಾರ್ಟ್‌ಮೆಂಟ್ ಜಲಾವೃತವಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.
ಬಿಬಿಎಂಪಿ ಅಧಿಕಾರಿಗಳು ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ ಹಾಗೂ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಅಪಾರ್ಟ್‌ಮೆಂಟ್ ಸಂಕೀರ್ಣದಿಂದ ನೀರನ್ನು ಪಂಪ್ ಮಾಡುತ್ತಿರುವುದು ಕಂಡುಬಂದಿತ್ತು. ಈ ಅಪಾರ್ಟ್‌ಮೆಂಟ್ ಕೆರೆ ಮಟ್ಟದಿಂದ 25 ಅಡಿ ಕೆಳಗಿದ್ದು, ಪದೇ ಪದೇ ಜಲಾವೃತವಾಗುತ್ತಿರುವುದೇ ಇದಕ್ಕೆ ಕಾರಣ ಎಂದು ಬಿಬಿಎಂಪಿ ಹೇಳಿದೆ. ಅಪಾರ್ಟ್‌ಮೆಂಟ್‌ಗೆ ಶಾಶ್ವತ ಗೋಡೆ ನಿರ್ಮಿಸುವಂತೆ ನಿವಾಸಿಗಳು ಒತ್ತಾಯಿಸಿದ್ದಾರೆ.
ವಿಜಯನಗರ ಸಮೀಪದ ಮಧುವನದಲ್ಲಿ ಕೊಳಚೆ ನೀರು ಉಕ್ಕಿ ಹರಿದ ಪರಿಣಾಮ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಇತ್ತೀಚೆಗೆ ಉದ್ಘಾಟನೆಗೊಂಡ ಪಾಲಿಕೆ ಬಜಾರ್ ಕೂಡ ನೀರಿನಿಂದ ತುಂಬಿತ್ತು. ಬಿನ್ನಿಪೇಟೆಯಲ್ಲಿ ಪಾರ್ಕ್ ವ್ಯೂ ಅಪಾರ್ಟ್ ಮೆಂಟ್ ನ ಏಳು ಅಡಿ ಎತ್ತರದ ಕಾಂಪೌಂಡ್ ಗೋಡೆ ಹಲವು ದ್ವಿಚಕ್ರ ವಾಹನಗಳ ಮೇಲೆ ಬಿದ್ದಿದ್ದು, ಪಕ್ಕದ ಮನೆಗಳಿಗೆ ಮಳೆ ನೀರು ಸೇರಿ ಚರಂಡಿ ನೀರು ನುಗ್ಗಿತ್ತು.
ಕಳಪೆ ಮೂಲಸೌಕರ್ಯಕ್ಕಾಗಿ ಬಿಬಿಎಂಪಿ ವಿರುದ್ಧ ನೆಟಿಜನ್ ಗಳು ಹರಿಹಾಯ್ದಿದ್ದಾರೆ. ನಗರವು ಒಂದು ಗಂಟೆಗಿಂತ ಕಡಿಮೆ ಮಳೆಯನ್ನು ತಡೆದುಕೊಳ್ಳಲು ಸಾಧ್ಯವಾಗದಿರುವಾಗ ಬ್ರಾಂಡ್ ಬೆಂಗಳೂರು ಅನ್ನು ಹೇಗೆ ನಿರ್ಮಿಸಬಹುದು ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಟೋಲ್ ಪ್ಲಾಜಾ, ನಾಯಂಡಹಳ್ಳಿ, ಕಲ್ಯಾಣ್ ನಗರ, ಬೆಳ್ಳಂದೂರು ಮತ್ತು ಹೆಬ್ಬಾಳದ ಕೆಲವು ಪ್ರದೇಶಗಳು ಜಲಾವೃತಗೊಂಡಿತ್ತು. ಬೆಂಗಳೂರು ದಕ್ಷಿಣ, ಪಶ್ಚಿಮ ಮತ್ತು ಯಲಹಂಕ ವಲಯಗಳಲ್ಲಿ ಹೆಚ್ಚಿನ ಸಮಸ್ಯೆಗಳು ವರದಿಯಾಗಿದ್ದು, ಇತರ ಐದು ವಲಯಗಳು ಹೆಚ್ಚಿನ ಸಮಸ್ಯೆಗಳಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.