ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಗುರುವಾರ ಮುಕ್ತಾಯಗೊಳಿಸಿದ್ದು, ಅಕ್ಟೋಬರ್ 14ಕ್ಕೆ ತೀರ್ಪು ಕಾಯ್ದಿರಿಸಿದೆ.
ಜಾಮೀನು ಕೋರಿ ಪ್ರಕರಣದ ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ 57ನೇ ಸಿಸಿಎಚ್ ನ್ಯಾಯಾಲಯ, ಆರೋಪಿ ಪರ ವಕೀಲ ಸಿವಿ ನಾಗೇಶ್ ಹಾಗೂ ಎಸ್ಪಿಪಿ ಪ್ರಸನ್ನ ಕುಮಾರ್ ಸುದೀರ್ಘ ವಾದ-ಪ್ರತಿವಾದಗಳನ್ನು ಆಲಿಸಿ ತೀರ್ಪು ಕಾಯ್ದಿರಿಸಿದೆ.
ಅಕ್ಟೋಬರ್ 14 ರಂದು ಎ2 ಆರೋಪಿ ದರ್ಶನ್ಗೆ ಜಾಮೀನು ಸಿಗುತ್ತದೆಯೋ ಇಲ್ಲವೋ ಎಂಬುದು ತಿಳಿಯಲಿದೆ. ಅದೇ ದಿನ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ, ಎ8 ರವಿಶಂಕರ್, ಎ11, ಎ12 ಹಾಗೂ ಎ13 ಅವರ ಜಾಮೀನು ಅರ್ಜಿಯ ಆದೇಶವೂ ಹೊರಬೀಳಲಿದೆ.
ಅಕ್ಟೋಬರ್ 14 ರಂದು ಎ13 ದೀಪಕ್ಗೆ ಜಾಮೀನು ಸಿಗುವುದು ಖಾತ್ರಿಯಾಗಿದೆ. ಏಕೆಂದರೆ ದೀಪಕ್ ಗೆ ಜಾಮೀನು ನೀಡಲು ಎಸ್ಪಿಪಿ ತಕರಾರು ಎತ್ತಿಲ್ಲ. ಆದರೆ ಇನ್ನುಳಿದ ಯಾವುದೇ ಆರೋಪಿಗಳಿಗೆ ಜಾಮೀನು ನೀಡಬಾರದು ಪ್ರಸನ್ನ ಕುಮಾರ್ ವಾದಿಸಿದ್ದಾರೆ.
ಇಂದು ನಡೆದ ವಾದದಲ್ಲಿ ಸಿವಿ ನಾಗೇಶ್ ಅವರು, ಎಸ್ಪಿಪಿ ಅವರು ಕಳೆದ ಎರಡು ದಿನಗಳಲ್ಲಿ ಸಲ್ಲಿಸಿದ ವಾದಕ್ಕೆ ಪ್ರತಿವಾದ ಮಂಡಿಸಿದರು. ನಾಗೇಶ್ ಅವರು, ಆರೋಪಿಗಳು ಮತ್ತು ಸಾಕ್ಷಿಗಳ ಲೊಕೇಶನ್ ಒಂದೇ ಕಡೆ ಇದ್ದವೆಂದು ಪೊಲೀಸರು ಮಾಡಿರುವ ತನಿಖೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಅದಾದ ಬಳಿಕ ಒಬ್ಬ ಸಾಕ್ಷಿಯ ಹೇಳಿಕೆಯನ್ನು 13 ದಿನ ತಡವಾಗಿ ದಾಖಲಿಸಿರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ, ಆ ಸಾಕ್ಷಿಯನ್ನು ಪೊಲೀಸರೇ ಸೃಷ್ಟಿಸಿದ್ದಾರೆ. ಬೇಕೆಂದೆ ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಆ ವರದಿಗೆ ಹೋಲಿಕೆ ಆಗುವಂತೆ ಸಾಕ್ಷಿಯಿಂದ ಹೇಳಿಕೆ ಪಡೆಯಲಾಗಿದೆ ಎಂದು ವಾದಿಸಿದರು.