ಬೆಂಗಳೂರು: ಭೂ ದಾಖಲೆಗಳ ವಾಸ್ತವ ಸ್ಥಿತಿಯನ್ನು ತಿಳಿಯಲು ಕಂದಾಯ ಇಲಾಖೆಯು ಪುರಾತನವಾದ ವಿಧಾನವನ್ನು ನವೀಕರಿಸುತ್ತಿದೆ. ಸಾಂಪ್ರದಾಯಿಕ ವಿಧಾನವನ್ನು ಇತ್ತೀಚಿನ ಆಧುನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸಲಾಗುತ್ತಿದೆ.
ಲ್ಯಾಂಡ್ ಬೀಟ್ (ಜಮೀನು ಗಸ್ತು ) ವ್ಯವಸ್ಥೆಯನ್ನು ಮರಳಿ ತರಲಾಗುತ್ತಿದ್ದು, ಜಿಲ್ಲೆ ಮತ್ತು ಗ್ರಾಮ ಮಟ್ಟದಲ್ಲಿ ಪ್ರತಿ ಭೂಮಿಯ ವಿವರಗಳನ್ನು ತಿಳಿಯಲು ಹೊಸ ‘ಜಮಾಬಂದಿ’ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗುತ್ತಿದೆ. ಒತ್ತುವರಿ ಪ್ರಕರಣಗಳು ಮತ್ತು ಭೂ ಹಕ್ಕುಗಳ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಇದನ್ನು ಮಾಡಲಾಗುತ್ತಿದೆ.
ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ 6,000 ಎಕರೆ ಜಮೀನು ಪರಿಶೀಲನೆಗೆ ಒಳಪಟ್ಟಿದೆ. ಲ್ಯಾಂಡ್ ಬೀಟ್ ವ್ಯವಸ್ಥೆಯಲ್ಲಿ ಅಲ್ಲಿನ ಸಿಬ್ಬಂದಿ ಸೂಕ್ಷ್ಮ ಪ್ರದೇಶಗಳು ಮತ್ತು ಪಾಯಿಂಟ್‌ಗಳನ್ನು ಪರಿಶೀಲಿಸುತ್ತಾರೆ. ಆದರೆ ಕಾಲಾನಂತರದಲ್ಲಿ ಇದು ನಿಂತು ಹೋಗಿತ್ತು. ಭೂ ಬದಲಾವಣೆ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಅದನ್ನು ಮರಳಿ ತರುವ ಅವಶ್ಯಕತೆಯಿದೆ ಎಂದು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.
ಜಮಾಬಂದಿ ಒಂದು ಸಾಫ್ಟ್‌ವೇರ್ ಆಗಿದ್ದು, ಇದರಲ್ಲಿ ಭೂಮಿ ಲೆಕ್ಕ ಶೋಧನೆ' (ಲ್ಯಾಂಡ್ ಆಡಿಟ್) ಮತ್ತು ಕಂದಾಯ ಆಡಿಟ್ ಡೇಟಾವನ್ನು ವಿಶ್ಲೇಷಿಸಲಾಗುತ್ತದೆ. ಬ್ರಿಟಿಷರ ಕಾಲದ ಡೇಟಾ ಬೇಸ್ ಬಳಸಿಕೊಂಡು 1865 ರಲ್ಲಿ ಮೊದಲ ಸರ್ವೆ ಮಾಡಲಾಗಿತ್ತು. ಅದೇ ಕಂದಾಯ ದಾಖಲೆಗಳಲ್ಲಿದೆ. ಒಂದೇ ಮಾಹಿತಿಯ ಆಧಾರದ ಮೇಲೆ ಎಲ್ಲಾ ಭೂ ದಾಖಲೆಗಳನ್ನು ನಿರ್ವಹಿಸಲಾಗಿದೆ. ಆದಾಗ್ಯೂ, ರಾಜಕೀಯ ಮತ್ತು ಆರ್ಥಿಕ ಕಾರಣಗಳಿಂದ ವಾರ್ಷಿಕವಾಗಿ ಮಾಡಬೇಕಾಗಿದ್ದ ಆಡಿಟ್ ನ್ನು ನಿಲ್ಲಿಸಲಾಗಿತ್ತು ಎಂದು ಅವರು ಹೇಳಿದರು.
ಈಗ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಹಳೆಯ ಬೇಸ್ ಮ್ಯಾಪ್‌ಗಳನ್ನು ಬಳಸಿ, ಆಡಿಟ್ ಮಾಡಲಾಗುತ್ತದೆ. ಒಮ್ಮೆ ಇದು ಪ್ರಾರಂಭವಾದ ನಂತರ ಪ್ರತಿವರ್ಷವೂ ಅದನ್ನು ಮುಂದುವರಿಸಬೇಕಾಗುತ್ತದೆ. ಪ್ರಸ್ತುತ ಜಿಲ್ಲೆಯಲ್ಲಿ ಅಥವಾ ಗ್ರಾಮ ಮಟ್ಟದಲ್ಲಿ ಪ್ರತಿವರ್ಷ ಆಡಿಟ್ ನಡೆಯಲ್ಲ. ಅದರ ಕಾರಣ ಪರಿಶೀಲಿಸುತ್ತಿರುವುದರಿಂದ, ಬೀಟ್ ಲ್ಯಾಂಡ್ ಸರ್ವೆಯೊಂದಿಗೆ ಜಿಲ್ಲಾ ಮತ್ತು ಗ್ರಾಮ ದಾಖಲೆಗಳಿಂದ ಸಂಗ್ರಹಿಸಿದ ಡೇಟಾವನ್ನು ಅಪ್‌ಲೋಡ್ ಮಾಡಲಾಗುತ್ತದೆ ಮತ್ತು ಮೂಲ ನಕ್ಷೆಗಳೊಂದಿಗೆ ಪರಿಶೀಲಿಸಲಾಗುತ್ತದೆ ಎಂದು ಅಧಿಕಾರಿ ಹೇಳಿದರು.
ಕೃಷಿ ಮತ್ತು ಕೃಷಿಯೇತರ ಭೂಮಿಯ ನಿಖರವಾದ ವಿಸ್ತೀರ್ಣ, ಪರಿವರ್ತನೆ, ಪರಿವರ್ತನೆಯ ದರ ಮತ್ತು ಭೂ ಬಳಕೆಯ ಮಾದರಿ ನಿರ್ಣಯಿಸಲು ಮತ್ತು ಖಚಿತಪಡಿಸಿಕೊಳ್ಳಲು ಜಮಾಬಂದಿ ಸಾಫ್ಟ್‌ವೇರ್ ಬಳಸಲಾಗುತ್ತದೆ.
ಕಂದಾಯ ಇಲಾಖೆಯು ಅನೇಕ ಸಾಫ್ಟ್‌ವೇರ್‌ಗಳನ್ನು ಹೊಂದಿದ್ದು, ಸರ್ವೆ ಇತ್ಯರ್ಥ, ಭೂ ದಾಖಲೆ ಮುಂತಾದ ಅನೇಕ ವಿಭಾಗಗಳಿಂದ ಇದನ್ನು ನಿರ್ವಹಿಸಲಾಗುತ್ತಿದೆ. ತೆರಿಗೆ ಪಾವತಿ ಮತ್ತು ಭೂಮಿಯ ವಿವರ ನೋಡಲು ಬಳಸುವ ನಾಗರಿಕರ ಇಂಟರ್ಫೇಸ್ ಸಾಫ್ಟ್‌ವೇರ್‌ಗಳನ್ನು ಹೊರತುಪಡಿಸಿ ಕ್ರಮೇಣವಾಗಿ ಎಲ್ಲಾ ಆ್ಯಪ್ ಗಳನ್ನು ಒಟ್ಟಿಗೆ ಲಿಂಕ್ ಮಾಡಿ, ಒಂದಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.