ಬೆಂಗಳೂರು: ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಿನ್ನೆಲೆ ರಾಮನಗರ, ಹಾವೇರಿ ಹಾಗೂ ಬಳ್ಲಾರಿ ಜಿಲ್ಲೆಗಳಿಗೆ ನೀತಿ ಸಂಹಿತೆ ಜಾರಿಯಾಗಿದ್ದು, ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಚೆಕ್ ಪೋಸ್ಟ್‌ಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ.
ಕೇಂದ್ರ ಚುನಾವಣಾ ಆಯೋಗವು ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಾದ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ಕ್ಷೇತ್ರಗಳಿಗೆ ಚುನಾವಣೆ ಘೋಷಣೆ ಮಾಡಿದ್ದು, ನ.13 ರಂದು ಮತದಾನ ಮತ್ತು ನ.23 ರಂದು ಮತ ಎಣಿಕೆ ನಡೆಯಲಿದೆ. ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಕ್ಟೋಬರ್ 18 ರಂದು ಅಧಿಸೂಚನೆ ಹೊರಡಿಸಲಾಗುತ್ತದೆ.
ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮಾತನಾಡಿ, ‘ಇಸಿಐ ಮಂಗಳವಾರ ಉಪಚುನಾವಣೆ ದಿನಾಂಕ ಪ್ರಕಟಿಸಿದ್ದು, ಶಿಷ್ಟಾಚಾರದ ಪ್ರಕಾರ ಚುನಾವಣಾ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ. ಅಕ್ಟೋಬರ್ 18ರಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ನವೆಂಬರ್ 23ರಂದು ಉಪಚುನಾವಣೆ ನಡೆಯಲಿದೆ. 253 ಬೂತ್‌ಗಳ ಪೈಕಿ 53 ಬೂತ್ ಗಳನ್ನು ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.
ಕ್ಷೇತ್ರದ ಒಟ್ಟು 2,36,100 ಮತದಾರರಲ್ಲಿ 1,17,739 ಪುರುಷರು, 1,18,279 ಮಹಿಳಾ ಮತದಾರರು ಮತ್ತು 29 ತೃತೀಯಲಿಂಗಿಗಳಿದ್ದಾರೆ. ತಾಲೂಕಿನ ಪ್ರವೇಶ ದ್ವಾರದಲ್ಲಿ ಎಂಟು ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದ್ದು, 24x7 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಚುನಾವಣೆ ಕಾರ್ಯಕ್ಕಾಗಿ 1,215 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿಕಂಟ್ರೋಲ್ ರೂಂ ಅನ್ನು ತೆರೆಯಲಾಗಿದ್ದು, ನೀತಿ ಸಂಹಿತೆ ಉಲ್ಲಂಘನೆ ದೂರು, ಮತದಾರರ ಪಟ್ಟಿಯಲ್ಲಿಹೆಸರು ನೋಂದಾಯಿಸುವುದು ಸೇರಿ ಚುನಾವಣೆ ಸಂಬಂಧಿತ ಸಾರ್ವಜನಿಕರ ಕುಂದು ಕೊರತೆಗಳು ಇದ್ದಲ್ಲಿ ಟೋಲ್ ಫ್ರೀ ಸಂಖ್ಯೆ 1950 ಅಥವಾ 08392-277100 ಗೆ ಕರೆ ಮಾಡಬಹುದು. ಮತದಾರರಿಗೆ ಪ್ರಭಾವಕ್ಕೊಳಪಡುವ ರಾಜಕೀಯ ಸಭೆ, ಸಮಾರಂಭಗಳನ್ನು ನಿಷೇಧಿಸಲಾಗಿದೆ. ಒಂದು ವೇಳೆ ಯಾವುದೇ ಸಭೆ ಸಮಾರಂಭಗಳು ಅವಶ್ಯಕವಿದ್ದಲ್ಲಿ ಚುನಾವಣಾಧಿಕಾರಿಗಳ ಪರವಾನಿಗೆ ಪಡೆದ ನಂತರವೇ ಕಾರ್ಯಕ್ರಮ ಆಯೋಜಿಸಬೇಕು ಎಂದು ತಿಳಿಸಿದರು.
ನೀತಿಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಯಾವುದೇ ಸಭೆ ಸಮಾರಂಭ ನಡೆಸಲು ಅನುಮತಿ ಕಡ್ಡಾಯವಾಗಿರುತ್ತದೆ. ಸಾರ್ವಜನಿಕ ಸಮಾರಂಭಗಳನ್ನು ನಡೆಸಿ ಯಾವುದೇ ಉಡುಗೊರೆ, ಬಹುಮಾನ ವಿತರಿಸುವಂತಿಲ್ಲ. ಮದುವೆ ಮೊದಲಾದ ಕೌಟುಂಬಿಕ ಕಾರ್ಯಕ್ರಮಗಳಿಗೆ ಅವಕಾಶವಿದ್ದು, ಬಾಡೂಟ ಆಯೋಜಿಸಬೇಕಾದಲ್ಲಿ ಚುನಾವಣಾಧಿಕಾರಿಯಿಂದ ಅನುಮತಿ ಪಡೆಯಬಹುದಾಗಿದೆ. ಸಾರ್ವಜನಿಕವಾಗಿ ಬಾಡೂಟ ವಿತರಣೆ ಮಾಡಿದರೆ ಕ್ರಮ ಜರುಗಿಸಲಾಗುವುದು ಎಂದು ಇದೇ ವೇಳೆ ಎಚ್ಚರಿಸಿದ್ದಾರೆ.
ಮುಕ್ತ ಮತ್ತು ನ್ಯಾಯಸಮ್ಮತ ಮತದಾನವನ್ನು ಖಚಿತಪಡಿಸಿಕೊಳ್ಳಲು 3,500 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಶೋಭಾ ರಾಣಿ ವಿ ಜೆ ಅವರು ಹೇಳಿದ್ದಾರೆ.