ST ವಸತಿ ಶಾಲೆಗಳಿಗೆ 'ಮಹರ್ಷಿ ವಾಲ್ಮೀಕಿ' ಹೆಸರು; ಹಾವೇರಿ: ಮಳೆ ನೀರಿನಲ್ಲಿ ಕೊಚ್ಚಿಹೋಗಿ ಬಾಲಕ ಸಾವು; ಕಾವೇರಿ ತೀರ್ಥೋದ್ಭವ; ಶ್ವಾನಗಳ ಹಬ್ಬ ಆಚರಣೆ! ಇವು ಇಂದಿನ ಪ್ರಮುಖ ಸುದ್ದಿಗಳು 17-10-2024
1. ST ವಸತಿ ಶಾಲೆಗಳಿಗೆ 'ಮಹರ್ಷಿ ವಾಲ್ಮೀಕಿ' ಹೆಸರು
ರಾಜ್ಯದ ಎಲ್ಲಾ ST ವಸತಿ ಶಾಲೆಗಳಿಗೆ 'ಮಹರ್ಷಿ ವಾಲ್ಮೀಕಿ ವಸತಿ ಶಾಲೆಗಳು' ಎಂದು ಮರುನಾಮಕರಣ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಇದಲ್ಲದೆ, ರಾಯಚೂರು ವಿಶ್ವವಿದ್ಯಾಲಯವನ್ನು ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲಾಗುತ್ತದೆ ಎಂದರು. ಇದೇ ವೇಳೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ, ಅಲ್ಪಸಂಖ್ಯಾತ ಸಮುದಾಯಗಳ ಸಮಾನತೆಯನ್ನು ಉತ್ತೇಜಿಸುವಲ್ಲಿ ಬಿಜೆಪಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಟೀಕಿಸಿದರು.
2. ಮಳೆ ನೀರಿನಲ್ಲಿ ಕೊಚ್ಚಿ ಹೋದ ಬಾಲಕ: ಪೋಷಕರ ಆಕ್ರಂದನ
ಹಾವೇರಿಯಲ್ಲಿ ಮಳೆ ನೀರಿನಲ್ಲಿ 12 ವರ್ಷದ ಬಾಲಕನೋರ್ವ ಕೊಚ್ಚಿಕೊಂಡು ಹೋಗಿ ಬಳಿಕ ಪತ್ತೆಯಾಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿದೆ. ಹಾವೇರಿ ಜಿಲ್ಲೆಯ ಹಳೇ ಪಿ.ಬಿ.ರಸ್ತೆಗೆ ಹೊಂದಿಕೊಂಡಿರುವ ಶಿವಾಜಿನಗರದ 3ನೇ ಕ್ರಾಸ್‌ನಲ್ಲಿರುವ ಕಾಲುವೆಯಲ್ಲಿ ಬಾಲಕ ನಿವೇದನ್ ಬಸವರಾಜ ಗುಡಿಗೇರಿ ಕೊಚ್ಚಿ ಹೋಗಿದ್ದನು. ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರೂ ಫಲ ನೀಡಲಿಲ್ಲ. ಬಾಲಕ ನಿವೇದನ್ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಸಚಿವ ಶಿವಾನಂದ ಎಸ್ ಪಾಟೀಲ ನಿವೇದನ್ ಕುಟುಂಬಕ್ಕೆ ಪರಿಹಾರ ವಿತರಣೆಗೆ ಸೂಚನೆ ನೀಡಿದ್ದಾರೆ. ಚರಂಡಿ ನೀರು ಸರಾಗವಾಗಿ ಹರಿದುಹೋಗುವಂತೆ ಎಲ್ಲೆಲ್ಲಿ ಬ್ಲಾಕ್ ಆಗಿದೆ ಎಂಬುದನ್ನು ಗುರುತಿಸಿ ತೆರವುಗೊಳಿಸಬೇಕು. ಮನೆಗಳಿಗೆ ಮಳೆ ನೀರು ನುಗ್ಗಿ ಸಂಕಷ್ಟದಲ್ಲಿರುವ ಕುಟುಂಬಗಳ ನೆರವಿಗೆ ತಕ್ಷಣ ಧಾವಿಸಬೇಕು ಎಂದು ಸೂಚನೆ ನೀಡಿದ್ದಾರೆ.
3. ಸರಣಿ ಅಪಘಾತದಲ್ಲಿ ನಾಲ್ವರು ಸಾವು
ಕಲಬುರಗಿಯ ಜೇವರ್ಗಿ ರಸ್ತೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದ ಸರಣಿ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ನಿನ್ನೆ ರಾತ್ರಿ 8.30ರ ಸುಮಾರಿಗೆ ಲಾರಿ, ಕಾರು, ದ್ವಿಚಕ್ರ ವಾಹನಗಳ ನಡುವೆ ಈ ಸರಣಿ ಅಪಘಾತ ಸಂಭವಿಸಿತ್ತು. ಭೀಕರ ಅಪಘಾತದಲ್ಲಿ ಬೈಕ್ ಮತ್ತು ಕಾರಿನಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಮೃತರನ್ನು ರಾಘವೇಂದ್ರ, ಮುಜಾಹಿದ್, ಹುಸೇನ್, ಮೌಲಾಬಿ ಎಂದು ಗುರುತಿಸಲಾಗಿದೆ. ಬೈಕ್ ಸವಾರನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಬೈಕ್‌ನ್ನು ವೇಗವಾಗಿ ಚಲಾಯಿಸಿಕೊಂಡು ಬಂದ ಸವಾರ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಲಾರಿ ಚಾಲಕ ಬ್ರೇಕ್ ಹಾಕಿದ್ದು ಹಿಂದಿನಿಂದ ಬಂದ ಕಾರು ಲಾರಿಗೆ ಡಿಕ್ಕಿಯಾಗಿ ಅವಘಡ ಸಂಭವಿಸಿದೆ.
4. ಶ್ವಾನಗಳ ಹಬ್ಬ ಆಚರಿಸಿದ ಬಿಬಿಎಂಪಿ
BBMP ಅಕ್ಟೋಬರ್ 17ರಂದು 'ಕುಕುರ್ ತಿಹಾರ್' ಎಂದು ಕರೆಯಲ್ಪಡುವ 'ನಾಯಿಗಳ ಹಬ್ಬ'ವನ್ನು ಆಚರಿಸಿದೆ. ಈ ವಿಶಿಷ್ಟ ಕಾರ್ಯಕ್ರಮವು ನಗರದಾದ್ಯಂತ ವಸತಿ ಕಲ್ಯಾಣ ಸಂಘಗಳು ಮತ್ತು ಪ್ರಾಣಿ ಪಾಲಕರನ್ನು ಒಗ್ಗೂಡಿಸುತ್ತದೆ. ಮನುಷ್ಯರು ಮತ್ತು ಪ್ರಾಣಿಗಳ ನಡುವಿನ ಪ್ರೀತಿ ಮತ್ತು ಬಂಧವನ್ನು ಎತ್ತಿ ತೋರಿಸುವ ಕಾರ್ಯಕ್ರಮ ಇದಾಗಿದೆ. ಬಿಬಿಎಂಪಿಯು ನಾಲ್ಕು ವಾರ್ಡ್‌ಗಳಿಂದ ಪೌರಕಾರ್ಮಿಕರನ್ನು ನೇಮಿಸುವ ಮೂಲಕ ಪ್ರಾಯೋಗಿಕ ಫೀಡಿಂಗ್ ಉಪಕ್ರಮವನ್ನು ಪ್ರಾರಂಭಿಸಿತು. ಆಯಾ ಪ್ರದೇಶದ ರೆಸ್ಟೋರೆಂಟ್‌ಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ಸಮುದಾಯ ನಾಯಿಗಳಿಗೆ ಆಹಾರ ನೀಡಲು ಸಹಾಯ ಮಾಡುತ್ತದೆ. ಸಹವರ್ತಿನ್ ಅನಿಮಲ್ ವೆಲ್ಫೇರ್ ಟ್ರಸ್ಟ್ ಜೊತೆಗೆ BBMP ಪಶುಸಂಗೋಪನೆ ಇಲಾಖೆ ಮತ್ತು ಇತರ ಪಾಲುದಾರರು 'BITEFREELOCALITY' ಕಾರ್ಯಕ್ರಮದ ಅಡಿಯಲ್ಲಿ ಅನೇಕ ಉಪಕ್ರಮಗಳನ್ನು ಪರಿಚಯಿಸಲು ಉದ್ದೇಶಿಸಿದ್ದಾರೆ.
5. ಕಾವೇರಿ ತೀರ್ಥೋದ್ಭವ: ಕಣ್ತುಂಬಿಕೊಂಡ ನೂರಾರು ಭಕ್ತರು
ರಾಜ್ಯದ ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಇಂದು ಬೆಳಗ್ಗೆ 7 ಗಂಟೆ 40 ನಿಮಿಷಕ್ಕೆ ತುಲಾ ಲಗ್ನದಲ್ಲಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವವಾಗಿದೆ. ಬ್ರಹ್ಮಕುಂಡಿಕೆಯಲ್ಲಿ ತೀರ್ಥಸ್ವರೂಪಿಣಿಯಾಗಿ ಕಾವೇರಿ ಮಾತೆ ದರ್ಶನ ನೀಡಿದ್ದಾಳೆ. ಕೊಡಗು ಜಿಲ್ಲೆಯ ಭಾಗಮಂಡಲ ಸಮೀಪ ತಲಕಾವೇರಿಯ ತೀರ್ಥೋದ್ಭವ ಬ್ರಹ್ಮಕುಂಡಿಕೆಯಲ್ಲಿ ಬಳಿ ಪ್ರಶಾಂತ್ ಆಚಾರ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು. ತೀರ್ಥೋದ್ಭವ ನೂರಾರು ಭಕ್ತರು ಕಣ್ತುಂಬಿಕೊಂಡರು. ಭಾಗಮಂಡಲ-ತಲಕಾವೇರಿಯಲ್ಲಿ ಒಂದು ತಿಂಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದೆ.